ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ
ಜಯ ಧ್ವಜ ನ್ಯೂಸ್ ,ರಾಯಚೂರು ,ಮೇ.25- ಪ್ರಾಥಮಿಕ, ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗು ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲ ರಂಗ ಕಲ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಇಂದು ಅಂಬೇಡ್ಕರ್ ವೃತ್ತದಲ್ಲಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಹಲವಾರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ನೇಮಕಾತಿಯನ್ನು ಮಾಡಿರುವುದಿಲ್ಲ. ಪ್ರತಿ ವರ್ಷ 15 ರಿಂದ 20 ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಿದ್ದಾರೆ. ಆ ಹುದ್ದೆಗಳನ್ನು ಹಾಗೆಯೇ ಖಾಲಿ ಬಿಡಲಾಗಿದೆ. ಇಡೀ ರಾಜ್ಯದಲ್ಲಿ ಅಂದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 79,694 ಹುದ್ದೆಗಳು ಖಾಲಿ ಇವೆ.
ಕಲ್ಯಾಣ ಕರ್ನಾಟಕ ಭಾಗವು ಇಡೀ ರಾಜ್ಯದಲ್ಲಿಯೇ ಶಿಕ್ಷಕರ ಗಂಭೀರ ಕೊರತೆಯನ್ನು ಎದುರಿಸುತ್ತಿದೆ. ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸೇರಿದಂತೆ 22,595 ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲಿ 18,317 ಪ್ರಾಥಮಿಕ ಶಾಲಾ ಶಿಕ್ಷಕರು, 4278 ಪ್ರೌಢಶಾಲಾ ಶಿಕ್ಷಕರ ಅನುಮೋದಿತ ಹುದ್ದೆಗಳು ಖಾಲಿ ಬಿಡಲಾಗಿದೆ. ಈ ವಿಷಯದಲ್ಲಿ ರಾಯಚೂರು ಜಿಲ್ಲೆಯು ಅತ್ಯಂತ ಗರಿಷ್ಠ ಪ್ರಮಾಣದ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಪ್ರಾಥಮಿಕ ಶಿಕ್ಷಕರ 8,460 ಅನುಮೋದಿತ ಹುದ್ದೆಗಳಲ್ಲಿ ಕೇವಲ 3900 ಶಿಕ್ಷಕರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 4560 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಪ್ರೌಢಶಾಲೆಯಲ್ಲಿ 2239 ಹುದ್ದೆಗಳನ್ನು ಅನುಮೋದಿಸಲಾಗಿದೆ. ಅದರಲ್ಲಿ 1175 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 1064 ಹುದ್ದೆಗಳು ಖಾಲಿಯಾಗಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಒಟ್ಟು 5624 ಶಿಕ್ಷಕರು ಇಲ್ಲ. ಶಿಕ್ಷಕರೇ ಇಲ್ಲದ ಶಾಲೆಗಳು ಶೂನ್ಯ ಶಿಕ್ಷಕ ಶಾಲೆಗಳು ಅತ್ಯಂತ ಹೆಚ್ಚು ರಾಯಚೂರು ಜಿಲ್ಲೆಯಲ್ಲಿದ್ದು, ದೇವದುರ್ಗ ತಾಲೂಕಿನಲ್ಲಿ 105 ಶಾಲೆಗಳಿವೆ. ಅವುಗಳನ್ನು ಅತಿಥಿ ಶಿಕ್ಷಕರ ಮೂಲಕ ನಡೆಸಲಾಗುತ್ತಿದೆ. ಏಕೋಪಾಧ್ಯಾಯ ಶಾಲೆಗಳು 266 ಇವೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಆಯ್ಕೆಯಾಗಿ ಬಂದ ಹತ್ತು ವರ್ಷ ಒಂದೇ ಕಡೆ ಕೆಲಸ ನಿರ್ವಹಿಸಿದ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಶಿಕ್ಷಕರ ಗಂಭೀರ ಕೊರತೆ ಉಂಟಾಗಿದೆ. ಶಿಕ್ಷಣದ ಗುಣಮಟ್ಟ ಕುಸಿತವಾಗಿದೆ. ಈ ಹಿಂದಿನ ವರ್ಷಗಳಲ್ಲಿ ಫಲಿತಾಂಶಗಳಲ್ಲಿ ಅತ್ಯಂತ ಕಳಪೆ ಸಾಧನೆ ದಾಖಲಾಗಿತ್ತು. ಇಡೀ ರಾಜ್ಯದಲ್ಲಿ ಜಿಲ್ಲೆ ಕೊನೆಯ ಸ್ಥಾನಗಳನ್ನು ಪಡೆಯುತ್ತಿರುವುದಕ್ಕೆ ಕಾರಣವಾಗಿದೆ. 2025-26 ಸಾಲಿನ ಫಲಿತಾಂಶದಲ್ಲಿ ಸುಧಾರಣೆ ಸಂತೋಷದ ವಿಷಯ ಆದರೆ ಉದ್ಯೋಗಾಕಾಂಶಿಗಳ ಬೇಡಿಕೆ ಪರಿಗಣಿಸಲು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ,ಶಿವಪ್ಪ ಅಸ್ಕಿಹಾಳ್ ,ವಿನೋದ್ ಕುಮಾರ್ ,ವೆಂಕಟೇಶ್ , ಕಾಶಿನಾಥ್ ಗಿಲೇರಿ , ಭೀಮರೆಡ್ಡಿ ನೆಲಹಾಳ್,ಹನುಮಂತ ಕಲ್ಲೂರು ,ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Comments
Post a Comment