ವಿಶೇಷ ರೈಲುಗಳಿಂದ ಖಾಯಂ ರೈಲು ಸೇವೆ - ಡಾ.ಬಾಬುರಾವ್ 


ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.13- ಬೆಂಗಳೂರು – ಕಲಬುರಗಿ ಮಧ್ಯೆ ಸಂಚರಿಸುವ ಸಾಪ್ತಾಹಿಕ ರೈಲುಗಳನ್ನು ಕಾಯಂ ರೈಲನ್ನಾಗಿ ಓಡಿಸಲು ದಕ್ಷಿಣ ಮಧ್ಯೆ ರೈಲ್ವೆ ಮಂಡಳಿ ತೀರ್ಮಾನಿಸಿದ ಹಿನ್ನಲೆಯಲ್ಲಿ ಮೇ. 15 ರಿಂದ ಈ ಬದಲಾವಣೆ ಕಾರ್ಯಾಚರಣೆಗೆ ಬರಲಿವೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. 

ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು, ಪ್ರತಿ ಶನಿವಾರ ರಾತ್ರಿ 10ಕ್ಕೆ ಹೊರಡುವ ಬೆಂಗಳೂರು ಕಂಟೋನ್ಮಂಟ್-ಕಲಬುರಗಿ (16563) ರೈಲು ಭಾನುವಾರ ಬೆಳಿಗ್ಗೆ 10.20ಕ್ಕೆ ಕಲಬುರಗಿ ತಲುಪಲಿದೆ. ಭಾನುವಾರ ಬೆಳಿಗ್ಗೆ 11.20ಕ್ಕೆ ಕಲಬುರಗಿಯಿಂದ-ಬೆಂಗಳೂರು ಕಂಟೋನ್ಮಂಟ್ಗೆ (16564) ಹೊರಡುವ ರೈಲು ಅದೇ ದಿನ ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ.

ವಾರದಲ್ಲಿ ಎರಡು ದಿನ ಬೆಂಗಳೂರಿನಿಂದ ಕಲಬುರಗಿ ಮೂಲಕ ಬೀದರ ಸಂಚರಿಸುವ ವಿಶೇಷ ರೈಲನ್ನು ಕಾಯಂಗೊಳಿಸಲಾಗಿದೆ. ಈ ಬದಲಾವಣೆ ಮೇ 15ರಿಂದ ಜಾರಿಗೆ ಬರಲಿದೆ. ಪ್ರತಿ ಶುಕ್ರವಾರ ಮತ್ತು ಭಾನುವಾರ ರಾತ್ರಿ 9.15ಕ್ಕೆ ಬೆಂಗಳೂರಿನಿಂದ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ರೈಲು (16559) ಮರುದಿನ ಬೆಳಿಗ್ಗೆ 9.05ಕ್ಕೆ ಕಲಬುರಗಿ ತಲುಪಲಿದೆ. ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ. 

ಪ್ರತಿ ಶನಿವಾರ ಮತ್ತು ಸೋಮವಾರ ಬೀದರ್ನಿಂದ (16560) ಮಧ್ಯಾಹ್ನ 2ಕ್ಕೆ ಹೊರಡುವ ರೈಲು ಸಂಜೆ 5ಕ್ಕೆ ಕಲಬುರಗಿ ತಲುಪಲಿದ್ದು, ಮರುದಿನ ಬೆಳಿಗ್ಗೆ 4ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. 

ಈ ರೈಲುಗಳು ಯಲಹಂಕ, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ ಮತ್ತು ಹುಮನಾಬಾದ್ ಸ್ಟೇಶನ್ ಗಳಲ್ಲಿ ನಿಲುಗಡೆಯಾಗಲಿವೆ. 

ಅದೇ ರೀತಿ ಹೈದ್ರಾಬಾದ್-ಬೆಳಗಾವಿ- ಹೈದ್ರಾಬಾದ್ ಸಾಪ್ತಾಹಿಕ ಎಕ್ಸ ಪ್ರೆಸ್ ರೈಲು (ಸಂಖ್ಯೆ 17072)  ಮೇ.15 ರಂದು ಶುಕ್ರವಾರ ಪ್ರಾರಂಭವಾಗಲಿದ್ದು, ಬೆಳಿಗ್ಗೆ 5.27 ಕ್ಕೆ ಹೈದ್ರಾಬಾದ್ ನಿಂದ ನಿರ್ಗಮಿಸಿ, ಮರುದಿನ ಬೆಳಿಗ್ಗೆ 7 ಗಂಟೆಗೆ  ಬೆಳಗಾವಿಗೆ ತಲುಪಲಿದೆ. ಮೇ.21 ರಂದು ಗುರುವಾರ ಸಂಜೆ 4.30 ಕ್ಕೆ ಬೆಳಗಾವಿಯಿಂದ ರೈಲು( ಸಂಖ್ಯೆ 17071) ನಿರ್ಗಮಿಸಿ  ಮರುದಿನ ಮಧ್ಯಾಹ್ನ 4.40 ಕ್ಕೆ ತಲುಪಲಿದೆ.  ರಾಯಚೂರಿಗೆ ರಾತ್ರಿ 9.38 ಕ್ಕೆ ಬರಲಿದೆ. ಈ ರೈಲು ಹೈದ್ರಾಬಾದ್, ಬೇಗಂ ಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಬಳ್ಳಾರಿ ಜಂಕ್ಷನ್, ದರೋಜಿ, ತೋರಣಗಲ್, ಹೊಸಪೇಟೆ, ಜಂಕ್ಷನ್, ಕೊಪ್ಪಳ, ಗದಗ, ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಲೊಂಡಾ ಜಂಕ್ಷನ್, ಖಾನಾಪೂರ ಸ್ಟೇಶನ್ ಗಳಲ್ಲಿ ನಿಲುಗಡೆಯಾಗಲಿದೆ. 

ಇದುವರೆಗೆ ವಿಶೇಷ ರೈಲಾಗಿದ್ದರಿಂದ ಗ್ರಾಹಕರಿಂದ ತತ್ಕಾಲ್ ಟಿಕೆಟ್ನಂತೆ ಹೆಚ್ಚುವರಿ ದರ ವಿಧಿಸಲಾಗುತ್ತಿತ್ತು. ಕಾಯಂ ರೈಲಾಗಿ ಪರಿವರ್ತನೆಯಾಗಿದ್ದರಿಂದ ಸಾಮಾನ್ಯ ದರ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Comments

Popular posts from this blog