ಅಂತರರಾಷ್ಟ್ರೀಯ ಕಾಮಿಕ್ಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಸಿರಿ ಪರವತಿನೇನಿಗೆ ಗೌರವ ಪ್ರಶಸ್ತಿ

ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಜಿಲ್ಲೆಯ ಅಮರೇಶ್ವರ ಕ್ಯಾಂಪ್ ನಿವಾಸಿ ವಿನೋದಕುಮಾರ ಅವರ ಪುತ್ರಿ ಸಿರಿ ಪರವತಿನೇನಿ ಅವರು ಅಂತರರಾಷ್ಟ್ರೀಯ ಮಟ್ಟದ ನಾಲ್ಕನೇ ಎಫ್‌ಪಿಜಿ ವಿಶ್ವವಿದ್ಯಾಲಯಗಳ ಎಸ್‌ಡಿಜಿಗಳ ಇಂಗ್ಲಿಷ್ ನಾಲ್ಕು-ಫ್ರೇಮ್ ಕಾಮಿಕ್ಸ್ ಸ್ಕ್ರಿಪ್ಟ್ ಸ್ಪರ್ಧೆ-2026ರಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಡಿಸೈನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿರಿ, "ಜಸ್ಟ್ ಒನ್ ಚಾಯಿಸ್" ಎಂಬ ಶೀರ್ಷಿಕೆಯ ಕಾಮಿಕ್ಸ್ ಕೃತಿಯ ಮೂಲಕ ಈ ಸಾಧನೆ ಮಾಡಿದ್ದಾರೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ ಎಸ್‌ಡಿಜಿ-12 (ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ) ವಿಷಯವನ್ನು ಆಧರಿಸಿ ರಚಿಸಲಾದ ಈ ಕಾಮಿಕ್ಸ್, ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳು ಹಾಗೂ ಪರಿಸರ ಸ್ನೇಹಿ ಆಯ್ಕೆಗಳ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ.
ತೈವಾನ್‌ನ ಮಿಂಗ್ ಚಿ ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಚಾಂಗ್ ಗುಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಜಂಟಿಯಾಗಿ ಆಯೋಜಿಸಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸಿರಿಯವರ ಸೃಜನಶೀಲತೆ, ಸಾಮಾಜಿಕ ಕಾಳಜಿ ಹಾಗೂ ಪರಿಸರ ಜಾಗೃತಿ ಮೂಡಿಸುವ ಸಂದೇಶಕ್ಕೆ ತೀರ್ಪುಗಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಿರಿಯವರ ಸಾಧನೆಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಅಭಿನಂದನೆ ಸಲ್ಲಿಸಿದ್ದು, ಜಿಲ್ಲೆಯ ಜನರು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲೂ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ಸಿರಿ, ಮತ್ತಷ್ಟು ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದಾರೆ.

Comments

Popular posts from this blog