ಭಗವಾನ್ ಮಹಾವೀರರ ಶಾಂತಿ, ಸೌಹಾರ್ಧತೆ ಸಂದೇಶಗಳು ಇಂದಿಗೂ ಪ್ರಸ್ತುತ -ಡಾ.ಹಂಪಣ್ಣ ಸಜ್ಜನ್
ಜಯ ಧ್ವಜ ನ್ಯೂಸ್ ,ರಾಯಚೂರು, ಮಾರ್ಚ್ 31- ಭಗವಾನ್ ಮಹಾವೀರರು ತಮ್ಮ ಜೀವಿತಾವಧಿಯಲ್ಲಿ ಪರಿಪಾಲನೆ ಮಾಡಿದ ಮತ್ತು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಶಾಂತಿ, ಸೌಹಾರ್ಧತೆ ಮತ್ತು ಸಹೋದರತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು.
ಅವರಿಂದು ನಗರದ ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಆರಾಧನಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಹಿಂಸಾ ತತ್ವ ಪ್ರತಿಪಾದಿಸಿದ ಮಹಾವೀರರು ಸೇರಿದಂತೆ ಅನೇಕ ಮಹನೀಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಮತ್ತು ಜೀವನ ಸಂದೇಶ ನೀಡಿದ್ದಾರೆ. ಅಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗದೇ, ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಅವರು ಮಾತನಾಡಿ, ಕರುಣೆ, ಅಹಿಂಸೆ, ಸಮಾನತೆ ಸೇರಿದಂತೆ ಭಗವಾನ್ ಮಹಾವೀರರು ಬೋಧನೆ ಮಾಡಿದ ಅಂಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ನಾವು ಬದುಕಬೇಕು, ಬೇರೆಯವರನ್ನು ಬದುಕಲು ಬಿಡಬೇಕೆಂಬುದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಹಾವೀರರು ತಿಳಿಸಿದ ಸಂದೇಶಗಳು ಕೇವಲ ಜೈನ ಧರ್ಮಕ್ಕೆ ಮಾತ್ರ ಸೀಮಿತವಲ್ಲ; ಅವರ ಸಂದೇಶಗಳಿಂದ ಇಡೀ ಮನುಕುಲದ ಉದ್ದಾರವಾಗುತ್ತದೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ರಾಯಚೂರಿನ ಪ್ರೇಮಲತಾ ಅವರು ಮಾತನಾಡಿ, ಜಗತ್ತಿನ ಜನರು ಅನುಭವಿಸುತ್ತಿದ್ದ ಅನೇಕ ತೊಂದರೆಗಳಿಗೆ ಪರಿಹಾರ ನೀಡಿದ ಅನೇಕ ಮಹನೀಯರಲ್ಲಿ ಮಹಾವೀರರು ಕೂಡ ಒಬ್ಬರಾಗಿದ್ದಾರೆ. ಜಗತ್ತನ್ನು ಉತ್ತಮ ರೀತಿಯಲ್ಲಿ ಕೊಂಡೋಯ್ಯಲು ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ. ಜೊತೆಗೆ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿದವರಲ್ಲಿ ಭಗವಾನ್ ಮಹಾವೀರರು ಕೂಡ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಂದ ಮೆರವಣಿಗೆ ಚಾಲನೆ: ಭಗವಾನ್ ಮಹಾವೀರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಚಾಲನೆ ನೀಡಿದರು.
ಜೈನ್ ಭವನದಿಂದ ಆರಂಭವಾದ ಮೆರವಣಿಗೆಯಲ್ಲಿ ಸಮಾಜದ ನೂರಾರು ಜನರು ಪಾಲ್ಗೊಂಡು ಶಾಂತಿ, ಸಹಿಷ್ಣುತೆ ಹಾಗೂ ಅಹಿಂಸೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಶುಗಿರಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರ ಸ್ವಾಮಿ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ರಾಯಚೂರು ಮಹಾನಗರ ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ, ಸಮಾಜದ ಪ್ರಮುಖರಾದ ಪ್ರಕಾಶ, ಕಿಶೋರ್, ಮಹಾವೀರ ಹರದರ, ಪ್ರಖರಾಜ, ಅಶ್ವಿನ ಭಾಟಿಯಾ, ಮೋಹನಲಾಲ್, ರಂಜಿತ್ ಕಟಾರಿಯಾ, ರಾಜುಭಾಯಿ ದೇಸಾಯಿ, ಮನ್ನೂಬಾಯಿ, ಅಶೀಕ ಲೋಧ್ರಾ ಸೇರಿದಂತೆ ಇತರರು ಇದ್ದರು.
ದಂಡಪ್ಪ ಬಿರಾದಾರ್ ನಿರೂಪಿಸಿದರು. ಅಶೋಕ ಕುಮಾರ್ ಜೈನ್ ವಂದಿಸಿದರು.




Comments
Post a Comment