ರಾಯಚೂರು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಪ್ರವಾಸ:
ಹಾಸ್ಟೆಲ್, ಬಸ್ ನಿಲ್ದಾಣ, ಜಿಲ್ಲಾ ಕಾರಾಗೃಹ, ಪೊಲೀಸ್ ಠಾಣೆಗಳಿಗೆ ಭೇಟಿ; ಪರಿಶೀಲನೆ
ಜಯ ಧ್ವಜ ನ್ಯೂಸ್ ,ರಾಯಚೂರು ಮಾ.25 - ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ಇಂದು ರಾಯಚೂರು ನಗರಕ್ಕೆ ಆಗಮಿಸಿ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದರು.
ಬೆಳಗ್ಗೆ ಬೆಂಗಳೂರಿನಿಂದ ಹೊರಟು ಹೈದ್ರಾಬಾದ್ ಮೂಲಕ ಮಧ್ಯಾಹ್ನ ವೇಳೆಗೆ ರಾಯಚೂರ ನಗರಕ್ಕೆ ಆಮಿಸಿದ ಆಯೋಗವು, ಮಧ್ಯಾಹ್ನ ಊಟದ ವಿರಾಮದ ಬಳಿಕ ವಿವಿಧೆಡೆ ಭೇಟಿ ಆರಂಭಿಸಿತು.
ಮೊದಲಿಗೆ ರಂಗಮಂದಿರ ಹತ್ತಿರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅಧ್ಯಕ್ಷರು ಹಾಗೂ ಸದಸ್ಯರು, ವಸತಿ ನಿಲಯಗಳ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರ ಅಹವಾಲು ಆಲಿಸಿದರು. ಸ್ನಾನಕ್ಕೆ ಬಿಸಿನೀರು ಸಿಗುತ್ತಾ? ಸೋಪುಕಿಟ್ ಕೊಡುತ್ತಾರಾ? ವೈದ್ಯರು ನಿಯಮಿತ ಭೇಟಿ ಕೊಡುತ್ತಾರಾ? ಸ್ಕೂಲ್ ಬಸ್ ಬರುತ್ತಾ? ಊಟ ಸರಿಯಾಗಿ ಕೊಡುತ್ತಾರಾ? ಸಿಸಿ ಟಿವಿ ಇದೆನಾ? ಎಂದು ಕೇಳಿ ಮಾಹಿತಿ ಪಡೆದುಕೊಂಡರು.
ಸದ್ಯ ಒಂದು ಕೋಣೆಯಲ್ಲಿ ಐದಾರು, ಆರೇಳು ಜನ ವಿದ್ಯಾರ್ಥಿನಿಯರಿದ್ದು, ಇಕ್ಕಟ್ಟಾಗಿವೆ. ವಿದ್ಯಾರ್ಥಿಗಳ ಸಂಖ್ಯೆಗನುಸಾರ ರೂಮಿನ ವ್ಯವಸ್ಥೆಯಾಗಬೇಕಿದೆ ಎಂದು ಹಾಸ್ಟೆಲ್ ವಾರ್ಡನ್ ಅವರು ತಿಳಿಸಿದರು. ಸಂಬಳ ಸಿಗುತ್ತಾ? ರೇಷನ್ ಶುಚಿಯಾಗಿಡಿ. ಅಡುಗೆಗೆ ಶುದ್ಧ ನೀರು ಬಳಸಿ ಎಂದು ಅಡುಗೆದಾರರಿಗೆ ಸಲಹೆ ಮಾಡಿದರು. ಅಡುಗೆ ಸಾಮಗ್ರಿ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.
ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಜ್ಞಾನವೃದ್ಧಿ ಶಿಬಿರ ನಡೆಸಲು ಸಲಹೆ ಮಾಡಿದರು.
ಬಳಿಕ ಕೇಂದ್ರ ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿದರು. ಬಸ್ ಗಳು ಸರಿಯಾಗಿ ಬರುತ್ತಾ? ಮಧ್ಯೆ ಟ್ರಿಪ್ ನಿಲ್ಲಸ್ತಾರಾ? ಎಂದು ಪ್ರಯಾಣಿಕರಿಗೆ ಕೇಳಿದರು. ರಾಯಚೂರು-ಲಿಂಗಸೂರ ಮಧ್ಯೆ ಸರಿಯಾದ ಬಸ್ಸಿನ ಸೌಕರ್ಯ ಇಲ್ಲ. ಡಿಪೋಗಳಿಂದ ಬಸಗಳನ್ನು ಸರಿಯಾಗಿ ಬಿಡುತ್ತಿಲ್ಲ. ತಡೆರಹಿತ ಬಸ ಬಿಟ್ಟು ವಿದ್ಯಾರ್ಥಿಗಳ ಪಾಸಿಗೆ ಅವಕಾಶ ನೀಡುತ್ತಿಲ್ಲ. ರಾಯಚೂರ-ಮಾನವಿ ಮಧ್ಯೆ ಸಾಕಷ್ಟು ಬಸಗಳು ಪ್ರತಿನಿತ್ಯ ಓಡಾಡಿದರು ನೀರಮಾನ್ವಿಯಂತ ಕಡೆಗೆ ನಿಲ್ಲುವುದಿಲ್ಲ. ಬರೀತಡೆ ರಹಿತ ಬಸ್ ಓಡಿಸುತ್ತಾರೆ ಎಂದು
ಪ್ರಯಾಣಿಕರು ದೂರಿದರು. ಜಿಲ್ಲಾಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಅಧ್ಯಕ್ಷರು ತಿಳಿಸಿದರು. ಬಸ್ ನಿಲ್ದಾಣದಲ್ಲಿನ ಬೇಕರಿ ಮತ್ತು ಇನ್ನೀತರರ ಅಂಗಡಿಗಳಲ್ಲಿನ ಸಾಮಗ್ರಿಗಳ ಮೇಲಿನ ಅವಧಿಯನ್ನು ಪರಿಶೀಲಿಸಿದರು.
ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು. ಅಲ್ಲಿನ ಕೈದಿಗಳ ಸೆಲಗಳಿಗೆ ಪ್ರವೇಶಿಸಿ, ಕೇಸ್ಗಳು ಸರಿಯಾಗಿ ಆಗುತ್ತಾ? ವಕೀಲರು ಇಲ್ಲದೇ ಇರುವವರು ಇದ್ದೀರಾ?
ಆರೋಗ್ಯ ತಪಾಸಣೆ ಮಾಡ್ತಾರಾ? ಹಾಸಿಗೆ ನೀಡಿದ್ದಾರಾ? ಎಂದು ಕೇಳಿದರು. ಪಾತ್ರೆ ತೊಳೆದು ಬಳಸಲು ಅಡುಗೆದಾರರಿಗೆ ತಿಳಿಸಿದರು. ಮಹಿಳಾ ಖೈದಿಗಳ ಸೆಲ್ ಗೆ ಭೇಟಿ ನೀಡಿ ಅವರ ಅಹವಾಲು ಆಲಿಸಿದರು. ಸಿಸಿ ಟಿವಿ ನಿರ್ವಹಣೆಗಳ ಬಗ್ಗೆ ಕೇಳಿದರು. ಜೈಲಿನ ಸಹಾಯಕ ಅಧೀಕ್ಷಕರಾದ ಅನಿತಾ ಎಸ್ ಹಿರೇಮನಿ ಅವರು ಜೈಲ್ ನಿರ್ವಹಣೆಯ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದರು.
ಬಳಿಕ ನಗರದ ಸದರ ಬಜಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಠಾಣೆಯ ಕ್ರೈಮ ರಿಜಿಸ್ಟರ್, ಪಿಎಸ್ ಆರ್ ಪರಿಶೀಲಿಸಿದರು. ವೇಳೆ, ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಕ್ಕಳ ಸ್ನೇಹಿ ಕೊಠಡಿ ವೀಕ್ಷಿಸಿದರು.
ಈ ವೇಳೆ ನಗರಸಭೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಾ, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಇಓ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಹಾಗೂ ಇನ್ನಿತರರು ಇದ್ದರು.




Comments
Post a Comment