ಕೆಕೆ ಆರ್ ಡಿಬಿ ಸಾವಿರಾರು ಕೋಟಿ ರೂ .ಕಾಮಗಾರಿಗಳಿಗೆ ಗ್ರಹಣ: ಅಧ್ಯಕ್ಷ ಅಜಯ್ ಸಿಂಗ್, ಕಾರ್ಯದರ್ಶಿ ನಳಿನ್ ಅತುಲ್ ವಜಾಗೊಳ್ಳಬೇಕು- ರಾಘವೇಂದ್ರ ಕುಷ್ಟಗಿ. ಜಯ ಧ್ವಜ ನ್ಯೂಸ್, ರಾಯಚೂರು, ಮಾ.24- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ ಎಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಡಳಿಯ ಐದು ಸಾವಿರ ಕೋಟಿ ರೂ. ಅನುದಾನದಲ್ಲಿ ಕಳೆದ ವರ್ಷ ಕೇವಲ 862 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕ್ರೀಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ ಆದರೆ ಉಳಿದ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಸದ ಕಾರಣ ಈ ಭಾಗಕ್ಕೆ ಮಹಾಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಮೊರನೇ ವ್ಯಕ್ತಿಯ ಸಂಸ್ಥೆಯನ್ನು ನೇಮಿಸಲು ಸ್ವತಃ ಸಿಎಂ ಆದೇಶಿಸಿದ್ದರೂ ಅದಕ್ಕೆ ಕಿಮ್ಮತ್ತು ನೀಡಲಾಗಿಲ್ಲವೆಂದರು. ಮಂಡಳಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕೂಡಲೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಅವರನ್ನು ಸರ್ಕಾರ ವಜಾ ಮಾಡಬೇಕೆಂದು ಆಗ್ರಹಿಸಿದರು. ಇಷ್ಟೆಲ್ಲಾ ಅನ್ಯಾಯವಾದರೂ ಈ ಭಾಗದ ಸಚಿವರು, ಶಾಸಕರು , ಸಂಸದರು ಧ್ವನಿ ಎತ್ತದಿರುವುದು ವಿಪರ್ಯಾಸದ ಸಂಗತಿ ಎಂದರು. ವಿರೋಧ ಪಕ್ಷಗಳು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಸಂಘಟನೆಯಿಂದ ಮೇ.24 ರಂದು ನಗರದಲ್ಲಿ 371(ಜೆ) ಹೋರಾಟಗಾರರ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಖಾಜಾ ಅಸ್ಲಾಂ, ಬಸವರಾಜ, ಜಾನ್ ವೆಸ್ಲಿ, ಬಸವರಾಜ, ಭೀಮರಾಯ, ವೀರಣ್ಣ ಶೆಟ್ಟಿ ಇನ್ನಿತರರು ಇದ್ದರು.


Comments
Post a Comment