ಕೃಷಿ ವಿ.ವಿ ಆಡಳಿತ ಭವನಕ್ಕೆ ವಾಲ್ಮೀಕಿ ಆಡಳಿತ ಭವನ ಎಂದು ನಾಮಕರಣ ಮಾಡಲು ಮನವಿ

ಜಯ ಧ್ವಜ ನ್ಯೂಸ್ ,ರಾಯಚೂರು, ಮಾ.28- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತ ಭವನಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಭವನ ಎಂದು ನಾಮಕರಣ ಮಾಡಬೇಕೆಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘವು ಮನವಿ ಮಾಡಿದೆ.ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿ, ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಕೇಂದ್ರ ಗ್ರಂಥಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಗ್ರಂಥಾಲಯ ಎಂದೂ ಮತ್ತು ಪ್ರೇಕ್ಷಾಗೃಹ ಭವನಕ್ಕೆ ಜಗಜ್ಯೋತಿ ಶ್ರೀ ಬಸವಣ್ಣನವರ ಹೆಸರು ನಾಮಕರಣ ಮಾಡುವ ಮೂಲಕ ಮಹಾನ್ ದಾರ್ಶನಿಕರನ್ನು ನೆನೆಯುವ ಕಾರ್ಯ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜವು ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಈ ಜಗತ್ತಿಗೆ ಮಹಾನ್ ಗ್ರಂಥವಾದ  ರಾಮಾಯಣವನ್ನು ನೀಡುವ ಮೂಲಕ ಒಬ್ಬ ರಾಜನಾದವನು ಯಾವ ರೀತಿ ರಾಜ್ಯಭಾರ ಮಾಡಬೇಕು ಮತ್ತು ತನ್ನ ರಾಜ್ಯದ ಪ್ರಜೆಗಳನ್ನು ಯಾವ ರೀತಿ ಸುರಕ್ಷಿತವಾಗಿ ಇಡಬೇಕು ಮತ್ತು ಅಣ್ಣ-ತಮ್ಮಂದಿರ ಸಂಬಂಧ, ತಂದೆ-ತಾಯಿಯ ಸಂಬಂಧ ಹೆಂಡತಿ-ಮಕ್ಕಳ ಸಂಬಂಧ ಮಹಿಳೆಯರಿಗೆ ಗೌರವ ಮತ್ತು ರಕ್ಷಣೆ ಯಾವ ರೀತಿ ನೀಡಬೇಕು ಹಾಗೂ ರಾಜನಾದವನು ಸದಾ ಧರ್ಮದ ಹಾದಿಯಲ್ಲಿ ನಡೆಯಬೇಕೆಂದು ಈ ಜಗತ್ತಿಗೆ ತೋರಿಸಿಕೊಟ್ಟ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರ ಹೆಸರನ್ನು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಭವನಕ್ಕೆ ನಾಮಕರಣ ಮಾಡುವ ಮೂಲಕ ಕೃಷಿ ವಿಶ್ವವಿದ್ಯಾನಿಲಯದ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಎನ್.ರಘುವೀರ ನಾಯಕ, ಮಲ್ಲಿಕಾರ್ಜುನ ನಾಯಕ, ರಾಮು ನಾಯಕ, ನರೇಂದ್ರ ನಾಯಕ, ರಮೇಶ ನಾಯಕ, ರಾಮಕೃಷ್ಣ ನಾಯಕ, ಬೋಳಬಂಡಿ ನಾಯಕ, ಮಹೇಶ ನಾಯಕ, ಮಲ್ಲೇಶ ನಾಯಕ ಸೇರಿದಂತೆ ಇತರರು ಭಾಗವಹಿಸಿದ್ದರು.

Comments

Popular posts from this blog