ಜಿಲ್ಲಾಡಳಿತದಿಂದ ಬಸವ ಜಯಂತೋತ್ಸವ:
ಸಮಾನತೆಯ ತತ್ವದ ಪ್ರತಿಪಾದಕ ಬಸವಣ್ಣ- ಶಾಸಕ ಡಾ.ಶಿವರಾಜ ಪಾಟೀಲ್
ಜಯ ಧ್ವಜ ನ್ಯೂಸ್ ,ರಾಯಚೂರು, ಏ 20- ಸಮಾನತೆಯ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರದ್ದು, ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕೆಂದು ರಾಯಚೂರು ನಗರದ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದವರು ಒಗ್ಗಟಾಗಿ ಸಮಾಜದ ಏಳಿಗೆ ಶ್ರಮಿಸಬೇಕು. ಸಮಸ್ಯೆಗಳು ಇದ್ದಲ್ಲಿ ಯಾವುದೇ ಸರ್ಕಾರ ಇರಲಿ ಹೋರಾಟ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಶಾಸಕರು ಹೇಳಿದರು.
ಏಪ್ರಿಲ್ 22ರಂದು ರಾಯಚೂರಿನಲ್ಲಿ ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ 10ಕೋಟಿ ರೂ. ವೆಚ್ಚದ ಕಲ್ಯಾಣ ಮಂಟಪದ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಮಾತನಾಡಿ, ಕರ್ನಾಟಕ ಕಂಡ ಮಹಾನ್ ಶ್ರೇಷ್ಠ ಶರಣ, ಬಸವಣ್ಣನವರು ಆಗಿದ್ದಾರೆ. ಅವರು ಮೂಢನಂಬಿಕೆಯನ್ನು ಬಲವಾಗಿ ವಿರೋಧ ಮಾಡುತ್ತಿದ್ದರು, ಅದಕ್ಕಾಗಿ ಅವರು ಸಮಾಜದ ದಿಂದ ಬಹಿಷ್ಕಾರಕ್ಕೆ ಒಳಗಾದರು. ಸಮಾಜದಲ್ಲಿ ಶೋಷಿತರಿಗೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮಿಸಿದ್ದಾರೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಅವರು ತಮ್ಮ ಉಪದೇಶಗಳಲ್ಲಿ ಹೇಳಿದ್ದು, ಇಂದಿನ ಯುವ ಪೀಳಿಗೆಗೆ ಅನ್ವಯಿಸುತ್ತದೆ. ಜಗತ್ತು ಅನೇಕ ರೀತಿಯ ತಂತ್ರಜ್ಞಾನವನ್ನು ಹೊಂದಿದ್ದರು ಸಹ ಬಸವಣ್ಣನವರ ತತ್ವದಡಿ ಕೆಲಸ ಮಾಡಲಾಗುತ್ತಿದೆ. ಬಸವಣ್ಣನವರು ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು 12ನೇ ಶತಮಾನದಲ್ಲಿ ನೀಡಿದ್ದರು ಎಂದರು.
ಉಪನ್ಯಾಸಕರಾಗಿ ಮೈಸೂರಿನ ಶರಣ ಸಾಹಿತಿಗಳಾದ ಶಿವಬುದ್ದಿ ಹಲ್ಲರೆ ಅವರು ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಶರಣರ ಗುಂಪನ್ನು ಕಟ್ಟಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ್ದರು. ಬಸವಣ್ಣನವರು ಕಾರ್ಲ್ ಮಾರ್ಕ್ಸ್ ಅವರಿಗೆ ಪ್ರೇರಣೆಯಾಗಿದ್ದರು. ಸಂಸತ್ತು ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪ್ರಸ್ತುತ ಜಗತ್ತಿನ ತುಂಬೆಲ್ಲಾ ಸಂಸತ್ತು ಕಾಣಬಹುದು ಅದಕ್ಕೆ ಮೂಲ ಕಾರಣ ಬಸವಣ್ಣನವರು ಆಗಿದ್ದಾರೆ. ಬಸವಣ್ಣ ಎಲ್ಲ ಧರ್ಮಗಳಲ್ಲಿ ದಯೆ ಇರಬೇಕು. ದೇಹವೆ ದೇಗುಲ, ಕಾಯಕವೇ ಕೈಲಾಸ ಹಾಗೂ ಶರಣ ಸತಿ ಎಂಬ ಮೂರು ಕಲ್ಪನೆಯನ್ನು ನೀಡಿದರು.ಬಸವಣ್ಣನವರ ಕಲ್ಯಾಣ ಸಾಮ್ರಾಜ್ಯವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಅವರ ಮಾರ್ಗದರ್ಶನವನ್ನು ನೀವೆಲ್ಲರೂ ಪಾಲಿಸಬೇಕು ಎಂದರು.
*ವಿವಿಧ ಗಣ್ಯರಿಂದ ಮಾಲಾರ್ಪಣೆ:* ಇದಕ್ಕೂ ಮುಂಚೆ ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಅವರ ಪುತ್ಥಳಿಗೆ ಸೋಮವಾರಪೇಟೆ ಹಿರೇಮಠದ ಪರಮ ಪೂಜ್ಯ ಷ।।ಬ್ರ। ಶ್ರೀ ಅಭಿನವ ರಾಜೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಸೇರಿದಂತೆ ವಿವಿಧ ಗಣ್ಯರಿಂದ ಪೂಜಾ ಹಾಗೂ ಮಾಲಾರ್ಪಣೆಯನ್ನು ಮಾಡಲಾಯಿತು.
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಮುಖಂಡರಾದ ಕೆ.ಶಾಂತಪ್ಪ, ಕಡಗೋಳ ಅಂಜೀನಯ್ಯ,ರಾಮನಗೌಡ ಸೇರಿದಂತೆ ಇತರರು ಸಚಿವರಿಗೆ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮಾ, ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶರಣ ಭೂಪಾಲ ನಾಡಗೌಡ, ಬಸವ ಕೇಂದ್ರ ಅಧ್ಯಕ್ಷ ರಾಚನಗೌಡ ಕೊಳೂರು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಜಾಗೃತಿ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜೆ.ಬಸವರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.






Comments
Post a Comment