ದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮ ಸುಂದರ ದಾಸರು- ಮುರಳೀಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ ,ರಾಯಚೂರು,ಏ.26- ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಿನ್ನೆ ಸಂಜೆ ವರಕವಿಗಳು ದಾಸ ಶ್ರೇಷ್ಠರಾದ ಶ್ರೀ ಶಾಮಸುಂದರ ದಾಸರ ಆರಾಧನೆಯನ್ನು ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು.
ಆರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ದಾಸವಾಣಿ ಕಾರ್ಯಕ್ರಮಗಳು ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮಗಳು ಜರಗಿದವು.
ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಉಪನ್ಯಾಸವನ್ನು ನೀಡಿ ಶ್ರೀ ಶಾಮ ಸುಂದರ ದಾಸರು ಮಾನವಿಯ ಗುಂಡಾಚಾರ್ಯರೆಂದು ಪ್ರಸಿದ್ಧಿಯಾಗಿದ್ದರು ಇವರು ಜಗನ್ನಾಥದಾಸರಿಂದ ಸ್ವಪ್ನಾಂಕಿತವನ್ನು ಪಡೆದು ಶಾಮ ಸುಂದರ ವಿಠಲ ಎಂಬ ಅಂಕಿತದಿಂದ ನೂರಾರು ಸಂಕೀರ್ತನೆಗಳನ್ನು, ಸುಳಾದಿಗಳನ್ನು, ಬಯಲಾಟಗಳನ್ನು,ಲಾವಣಿ ಪದಗಳನ್ನು, ಗೀಗಿ ಪದಗಳನ್ನು, ಶೋಬಾನಗೀತೆಗಳನ್ನು, ಜೋಗುಳ ಗೀತೆಗಳನ್ನು, ಕೋಲಾಟ ಪದಗಳನ್ನು ರಚಿಸಿ ಹರಿದಾಸ ಶ್ರೇಷ್ಠ ಆಗಿದ್ದಾರೆ.
ಇವರು ರಚಿಸಿದ ಒಂದೊಂದು ಕೃತಿಗಳು ಸಹ ಅತ್ಯಂತ ಮೌಲ್ಯಯುಕ್ತವಾಗಿದೆ ಮತ್ತು ಪ್ರಸಿದ್ಧಿಯನ್ನು ಪಡೆದಿವೆ ಇವರು ಅಸ್ಕಿಹಾಳ ಗೋವಿಂದ ದಾಸರು, ಶ್ರೀ ಗುರು ಜಗನ್ನಾಥದಾಸರ ಸಮಕಾಲಿನ ದಾಸರಾಗಿದ್ದರು. ಇವರು ಮಾನವಿಯಲ್ಲಿ ಜಾತ್ಯತೀತವಾಗಿ ಹರಿದಾಸ ದೀಕ್ಷೆ ನೀಡಿ ದಾಸ ಪರಂಪರೆಯನ್ನು ಬೆಳೆಸಿದ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಜಯ ಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ ಶಾಮಸುಂದರ ದಾಸರು ಕನ್ನಡದ ವರ ಕವಿಗಳಾದ ದ.ರಾ. ಬೇಂದ್ರೆ ಅವರ ಮೇಲೆ ಕೃತಿ ರಚಿಸಿ ಅವರಿಂದ ಪ್ರಶಂಸೆಗೆ ಒಳಪಟ್ಟು ಅವರಿಂದ ವರಕವಿಗಳು ಎಂದು ಬಿರದನ್ನು ಪಡೆದ ಹರಿದಾಸರಾಗಿದ್ದಾರೆ.
ಇವರ ಕೃತಿಗಳನ್ನು ಭಜನಾ ಮಂಡಳಿಗಳು ಹಾಗೂ ಹಲವಾರು ಸಂಗೀತಗಾರರು ಹಾಡುವುದರ ಮೂಲಕ ಪ್ರಸಿದ್ಧಿಯನ್ನು ಪಡೆದಿವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜದ ಯುವಮುಖಂಡರಾದ ಪ್ರಸನ್ನ ಆಲಂಪಲ್ಲಿ ಅವರು ಉದ್ಘಾಟಿಸಿದರು.
ಶ್ರೀ ಶಾಮಸುಂದರದಾಸರ ಕೀರ್ತನೆಗಳನ್ನು ಹಿರಿಯ ದಾಸವಾಣಿ ಕಲಾವಿದ ಶ್ರೀ ಸುರೇಶ್ ಕಲ್ಲೂರ ಅವರುಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶ್ರೀ ಶಾಮಸಂದರ ದಾಸರ ಭಾವಚಿತ್ರಕ್ಕೆ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರ ಆಚಾರ್ ಮುಂಗಲಿ ಅವರು ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಕೋಲಾರ್, ವಾಸುಕಿ ಕರಣಂ ಅದಿತಿಕರಣಂ, ಶ್ರೀ ನರಸಿಂಹ ಇವರಿಂದ ದಾಸವಾಣಿ ಜರಗಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ್ ಕುಲಕರ್ಣಿ,ಕೇಶವ ರಾವ್, ಮೋಹನ್ ಪೂಜಾರ್, ಕೃಷ್ಣಮೂರ್ತಿ ಹುಣಸಗಿ,ಶ್ರೀ ಲಕ್ಷ್ಮಿಕಾಂತ್ ಕರ್ಣಂ ತುಂಗಭದ್ರ, ಶ್ರೀಮತಿ ನಾಗರತ್ನ ಕಲ್ಲೂರ್, ಹಾಗೂ ಶ್ರೀಮತಿ ಪ್ರತಿಭಾ ಕುಲ್ಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





Comments
Post a Comment