ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ:
ಶಂಕರಾಚಾರ್ಯರ ಕಾರ್ಯ ಇಂದಿಗೂ ಶಾಶ್ವತ- ಶಾಸಕ ಶಿವರಾಜ ಪಾಟೀಲ್
ಜಯ ಧ್ವಜ ನ್ಯೂಸ್ ,ರಾಯಚೂರು, ಏ. 21- ಆದಿ ಶಂಕರಾಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ಅವರು ಮಾಡಿದ ಮಹಾನ್ ಕಾರ್ಯ ಇಂದಿಗೂ ಶಾಶ್ವತವಾಗಿದೆ. ಸಹಸ್ರಾರು ವರ್ಷಗಳ ನಂತರವು ಅವರು ಮಾಡಿದ ಕಾರ್ಯ ಮಹತ್ವದಾಗಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು.
ಅವರಿಂದು ಸಂಜೆ ನಗರದ ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಹಿಂದೂ ಎಂದು ಹೇಳಿಕೊಳ್ಳಲು ಶಂಕರಾಚಾರ್ಯರು ಮೂಲಕಾರಣ ಆಗಿದ್ದಾರೆ. ರಾಯಚೂರಿನ ಶೃಂಗೇರಿ ಶಂಕರ ಮಠಕ್ಕೆ ಬೇಕಾಗುವ ಅಗತ್ಯ ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗುವುದು. ಈಗಾಗಲೇ ಸಮಾಜದ ಆನೇಕ ಅಭಿವೃದ್ಧಿ ಕೆಲಸ ಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಉಪನ್ಯಾಸಕರಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಿನ ಧಾರ್ಮಿಕ ಉಪನ್ಯಾಸಕರು ಹಾಗೂ ಪುರೋಹಿತರಾದ ಸುಪ್ರತೀಕ ಭಟ್ ಅವರು ಮಾತನಾಡಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕ ತತ್ವಜ್ಞಾನಿಗಳಲ್ಲಿ ಆದಿ ಶಂಕರಾಚಾರ್ಯರು ಒಬ್ಬರು. ಅದ್ವೈತ ವೇದಾಂತದ ಅಡಿಪಾಯವನ್ನು ಹಾಕಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜಿವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಇಂದಿನ ಕೇರಳದ ಕಾಲಡಿಯಲ್ಲಿ ಜನಿಸಿದ್ದ ಆದಿ ಶಂಕರಾಚಾರ್ಯರು, ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರು. ಶಂಕರಾಚಾರ್ಯರು ಮೂರು ಸಲ ಕಾಲ್ನಡಿಗೆಯಲ್ಲಿ ದೇಶವನ್ನು ಸುತ್ತಿದ್ದರು ಎಂದರು. ಅದ್ವೈತ ಸಿದ್ಧಾಂತದ ಮೂಲಕ ಧರ್ಮದ ಹೆಸರಿನಲ್ಲಿ ಹರಡುತ್ತಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದ ಶಂಕರಾಚಾರ್ಯರು, ಆದ್ಯ ಗುರುವಾಗಿ ಪೂಜಿತರಾದರು ಎಂದರು.
ಕಾರ್ಯಕ್ರಮಕ್ಕೂ ಮೊದಲು ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಪರಶುರಾಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಾಣೇಶ್ ಕುಲಕರ್ಣಿ, ಮಹಾನಗರ ಪಾಲಿಕೆಯ ಕಚೇರಿ ವ್ಯವಸ್ಥಾಪಕ ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯವಸ್ಥಾಪಕ, ಶೈಲಜಾ ಆರ್.ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ್ರಾಕ್ಷಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ್, ಸಮಾಜದ ಮುಖಂಡರಾದ ಹನುಮಂತ ರಾವ್, ಕೃಷ್ಣಮೂರ್ತಿ ಹೆಬಸೂರು, ಏಕೆ ಬಿಎಂಎಸ್ ಜಿಲ್ಲಾ ಪ್ರತಿನಿಧಿ ರಮೇಶ ಕುಲಕರ್ಣಿ, ಈಶ್ವರ ಹೆಗ್ಗಡೆ, ಶಿವಪ್ರಸಾದ್, ವಸಂತ ರಾವ್, ಉದಯಶಂಕರ್ ದೇಸಾಯಿ , ರಾಘವೇಂದ್ರ ಚೂಡಾಮಣಿ, ಪ್ರಹ್ಲಾದರಾವ ಕಲ್ಮಲಾ, ಶ್ರೀಪಾದ ದೇಸಾಯಿ, ವೆಂಕಟೇಶ್ ಕೋಲಾರ, ರಾಜೇಶ್ ಸರಾಫ್ , ಶ್ರೀನಾಥ್ ಭಟ್, ಪ್ರಸನ್ನ ಆಲಂಪಲ್ಲಿ, ವೆಂಕಟೇಶ್ ನವಲಿ, ,ಸುಬ್ಬರಾವ್, ಶಿವಪ್ರಸಾದ್, ಅವಿನಾಶ್ ದೇಸಾಯಿ, ಪಾಂಡುರಂಗ ಕುರ್ಡಿಕರ, ಜಯಕುಮಾರ್ ದೇಸಾಯಿ ಸೇರಿದಂತೆ ಶಾರದಾ ಮಹಿಳಾ ಭಜನಾ ಮಂಡಳಿ, ಆದಿ ಶಂಕರಾಚಾರ್ಯ ಮಹಿಳಾ ಮಂಡಳಿಯ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರ ಭಜನೆ ಮೆರುಗು ನೀಡಿತು.





Comments
Post a Comment