ಪತ್ರಕರ್ತ ಸೋಮಣ್ಣ ಗುರಿಕಾರ ನಿಧನಕ್ಕೆ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ


ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.19- ಹಿರಿಯ ಪತ್ರಕರ್ತ ಸೋಮಣ್ಣ ಗುರಿಕಾರ ನಿಧನ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಇಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಮೊದಲಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಬಳಿಕ ಸೋಮಣ್ಣ ಗುರಿಕಾರ ಅವರ ಭಾವಚಿತ್ರಕ್ಕೆ ಪತ್ರಕರ್ತರು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಸೋಮಣ್ಣ ಅವರು ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಅನೇಕ ಜನಪರ ವರದಿಗಳನ್ನು ಮಾಡಿ ಗಮನ ಸೆಳೆದಿದ್ದರು. ಅವರು ಕಾರ್ಮಿಕರ ಕುಟುಂಬದಿಂದ ಬಂದವರಾಗಿದ್ದು, ಪತ್ರಿಕಾ ವೃತ್ತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.


ಕಳೆದ ಐದು–ಆರು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವೇಳೆ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ನೆರವಾಗಿದ್ದರು. ಸಿಎಂ ನಿಧಿ ಸೇರಿದಂತೆ ಹಲವರ ಸಹಾಯದಿಂದ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದು ದುಃಖಕರ ಸಂಗತಿ ಎಂದರು.


ಪತ್ರಕರ್ತರ ವೃತ್ತಿಯಲ್ಲಿ ಭದ್ರತೆಯ ಕೊರತೆ ಇದೆ. ಆರೋಗ್ಯ ಸಮಸ್ಯೆಗಳಿದ್ದರೂ ಅನೇಕರು ಆರ್ಥಿಕ ಸಂಕಷ್ಟದ ನಡುವೆಯೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗದೆ ಒತ್ತಡದ ಬದುಕು ಸಾಗಿಸುವ ಪರಿಸ್ಥಿತಿ ಪತ್ರಕರ್ತರದ್ದಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಹಲವಾರು ಪತ್ರಕರ್ತರು ದುಶ್ಚಟಗಳಿಗೆ ಒಳಗಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಂಘದಿಂದಲೂ ಸಮರ್ಪಕ ನೆರವು ನೀಡಲು ಸಾಧ್ಯವಾಗುತ್ತಿಲ್ಲ ಎಂದರು.


ಸರ್ಕಾರದಿಂದ ಮಾನ್ಯತೆ ಪಡೆದ ಕೆಲ ಪತ್ರಕರ್ತರಿಗೆ ಮಾತ್ರ ಆರೋಗ್ಯ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯುತ್ತಿವೆ. ಇದರಿಂದ ಅನೇಕ ಗ್ರಾಮೀಣ ಪತ್ರಕರ್ತರು ವಂಚಿತರಾಗುತ್ತಿದ್ದಾರೆ. ಆಂಧ್ರ ಪ್ರದೇಶ ಮಾದರಿಯಲ್ಲಿ ಗ್ರಾಮೀಣ ಭಾಗದ ಮಾನ್ಯತೆ ಹೊಂದಿದ ಪತ್ರಕರ್ತರಿಗೂ ಸೌಲಭ್ಯಗಳು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಹಿರಿಯ ಪತ್ರಕರ್ತ ಶಿವಮೂರ್ತಿ ಹಿರೇಮಠ ಮಾತನಾಡಿ, ಸೋಮಣ್ಣ ಗುರಿಕಾರ ಅವರೊಂದಿಗೆ ಕೆಲಸ ಮಾಡಿದ್ದೇವೆ. ಉತ್ತಮ ಬರವಣಿಗೆ ಶೈಲಿಯ ಜೊತೆಗೆ ಎಲ್ಲರೊಂದಿಗೂ ಆತ್ಮೀಯ ಬಾಂಧವ್ಯ ಹೊಂದಿದ್ದವರು. ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಡೆದ ಅನೇಕ ಸಮಸ್ಯೆಗಳ ಕುರಿತು ಪರಿಣಾಮಕಾರಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದರು. ಅವರ ಅಗಲಿಕೆಯ ದುಖ ಭರಿಸುವ ಶಕ್ತಿ ಕುಟುಂಬ ಸಿಗಲಿ ಎಂದರು.

ಪತ್ರಕರ್ತ ಮಂಜುನಾಥ ಸಾಲಿ ಮಾತನಾಡಿ, ಸೋಮಣ್ಣ ಗುರಿಕಾರ ಎಲ್ಲರೊಂದಿಗೂ ಸ್ನೇಹಪೂರ್ವಕವಾಗಿ ವರ್ತಿಸುತ್ತಿದ್ದರು. ಯಾವುದೇ ಕೆಲಸ ನೀಡಿದರೂ ಸಮಯಕ್ಕೆ ಸರಿಯಾಗಿ ವರದಿ ಕಳುಹಿಸುವ ಗುಣ ಅವರಲ್ಲಿತ್ತು. ತಮ್ಮ ಸಮಸ್ಯೆಗಿಂತ ಇತರರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದರು. ಆದರೆ, ತಮ್ಮ ನೋವುಗಳನ್ನು ಮಾತ್ರ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದರು.

ಪತ್ರಕರ್ತ ಅಂಬಣ್ಣ ಅರೋಲಿಕರ್ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಗಳಿಗೆ ನೆರವಾಗುವ ಕಾರ್ಯ ಮಾಡಬೇಕಿದೆ. ಒತ್ತಡದ ನಡುವೆಯೂ ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಅಭಿವೃದ್ಧಿಗೆ ನಾವು ಎಲ್ಲರೂ ಕೈಜೋಡಿಸಬೇಕು. ಇನ್ಸೂರೆನ್ಸ್, ಆರೋಗ್ಯ ಚಿಕಿತ್ಸೆ ವೆಚ್ಚ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕಿದೆ ಎಂದರು. 

ಹಿರಿಯ ಪತ್ರಕರ್ತರಾದ ಬಸವರಾಜ ನಾಗಡದಿನ್ನಿ, ಸಿದ್ಧಯ್ಯಸ್ವಾಮಿ, ವಿಜಯ ಜಾಗಟಗಲ್, ಶಿವಪ್ಪ ಮಡಿವಾಳರ್, ಚಂದ್ರಕಾಂತ ಮಸಾನಿ, ವಾಗೀಶ ಪಾಟೀಲ್, ವೆಂಕಟೇಶ ಹೂಗಾರ, ಎಂ.ಪಾಷಾ ಹಟ್ಟಿ, ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೊಮಿನ್,ಆನಂದ ಕುಲಕರ್ಣಿ , ಮಹಾನಂದ ನಾಯಕ , ನೀಲಕಂಠ ಸ್ವಾಮಿ, ಪ್ರಸನ್ನ ಜೈನ್, ಲಕ್ಷ್ಮಣ ಕಪಗಲ್, ಮುತ್ತಣ್ಣ ಹೆಳವರ್, ಜಯಕುಮಾರ ದೇಸಾಯಿ ಕಾಡ್ಲೂರು, ಅಣ್ಣಪ್ಪ ಮೇಟಿಗೌಡ, ಗುರುಗೌಡ, ಶಾಮಸುಂದರ್ , ಖಾದರ್, ಅಯ್ಯಪ್ಪ ಸ್ವಾಮಿ ಪಿಕಳಿಹಾಳ, ಶಿವಕುಮಾರ, ಬಾಲು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 



Comments

Popular posts from this blog