ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯಿಂದ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ? ಜಯ ಧ್ವಜ ನ್ಯೂಸ್, ರಾಯಚೂರು,ಮೇ.29- ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಅಲಂಕರಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿದೆ .ಅವರ ನೇತೃತ್ವದ ಸರ್ಕಾರದಲ್ಲಿ ಯಾರೆಲ್ಲ ಮಂತ್ರಿ ಮಂಡಲ ಸೇರುತ್ತಾರೆ ಎಂಬುದು ಇನ್ನೂ ನಿಖರವಾಗಿಲ್ಲ ಈಗಾಗಲೆ ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಗೆ ಮನವರಿಕೆ ಮಾಡುವಲ್ಲಿ ನಿರತರಾಗಿದ್ದಾರೆ . ರಾಯಚೂರು ಜಿಲ್ಲೆಯಿಂದ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕುತೂಹಲವಿದ್ದು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆಯೋ ಅಥವಾ ಹಳಬರನ್ನೇ ಮುಂದುವರಿಸುತ್ತಾರೋ ಎನ್ನುವುದು ಸ್ಪಷ್ಟ ಗೊಂಡಿಲ್ಲ. ಹಿರಿಯ ರಾಜಕಾರಣಿ ಎಐಸಿಸಿ ಮಟ್ಟದಲ್ಲಿ ತಮ್ಮದೆ ವರ್ಚಸ್ಸು ಹೊಂದಿರುವ ಎನ್ ಎಸ್ ಬೋಸರಾಜುರವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ ಉಳಿದಂತೆ ಜಿಲ್ಲೆಯಿಂದ ನಾಲ್ವರು ಶಾಸಕರು ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದು ಇಬ್ಬರು ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ನಾಮನಿರ್ದೇಶನ ಗೊಂಡಿದ್ದಾರೆ . ಉಳಿದ ಎರೆಡು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಕ್ಷ ತಮಗೂ ಅವಕಾಶ ನೀಡಬೇಕೆಂಬ ಮನೋಭಿಲಾಷೆ ಬಹುತೇಕ ಎಲ್ಲ ಶಾಸಕರು , ವಿಧಾನ ಪರಿಷತ್ ಸದಸ್ಯರು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು . ಸಚಿವ ಸ್ಥಾನ ದೊರೆತರೆ ತಮ್ಮ ಕ್ಷೇತ್ರ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯಕ್ಕೆ ಅಭಿವೃದ್ಧಿಯ ಕೊಡುಗೆ ನೀಡುವ ಬಯಕೆ ಹೊಂದಿದ್ದಾರೆ. ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸನಗೌಡ ತುರವೀಹಾಳ, ಮಾನ್ವಿ ಶಾಸಕ ಹಂಪಯ್ಯ ನಾಯಕ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾಗಿ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ ಇದ್ದಾರೆ ಇದರಲ್ಲಿ ಯಾರನ್ನು ಪಕ್ಷದ ಹೈಕಮಾಂಡ್ ಸಚಿವರನ್ನಾಗಿ ಮಾಡುತ್ತದೆ ಎಂಬುದು ನಿಗೂಡವಾಗಿದ್ದು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯಿಂದ ಯಾರಿಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.

Comments
Post a Comment