ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಜೂನ್ 20 ರಿಂದ ಪ್ರಾರಂಭವಾಗುವ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲಿ - ಪೂವಿತಾ ಎಸ್.
ಜಯ ಧ್ವಜ ನ್ಯೂಸ್ ,ರಾಯಚೂರು ,ಜೂ. 1- ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರ ಅಧ್ಯಕ್ಷತೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ( ಎಸ್.ಐ.ಆರ್)ರ ಕುರಿತು ಇಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ಜರುಗಿತು.
ಈ ವೇಳೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಮೂರನೇ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ರಾಯಚೂರು ಜಿಲ್ಲೆಯಲ್ಲಿ ಜೂನ್ 20 ರಿಂದ ಪ್ರಕ್ರಿಯೆಯು ಆರಂಭವಾಗಿ ಅಕ್ಟೋಬರ್ 7ಕ್ಕೆ ಮುಕ್ತಾಯವಾಗಲಿದೆ ಎಂದರು. ದಿನಾಂಕ:01.10.2026 ಅನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯಲಿದೆ. ಜೂನ್ 20 ರಿಂದ 29ರವರೆಗೆ ಈ ಪ್ರಕ್ರಿಯೆಯ ಸಿದ್ಧತೆ, ಪ್ರಕ್ರಿಯೆಯ ಭಾಗವಾಗಿರುವ ಎಲ್ಲಾ ಹಂತದ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ತರಬೇತಿ, ಅವಶ್ಯವಿರುವ ದಾಖಲೆಗಳ ಮುದ್ರಣ ಕಾರ್ಯ ಜರುಗಲಿದೆ ಎಂದರು.
ತದನಂತರ ಜೂನ್ 30 ರಿಂದ ಜುಲೈ 29 ರವರೆಗೆ ಜಿಲ್ಲೆಯ 07 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 1853 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ.ಗಳು) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಅರ್ಜಿಗಳನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಿ ಬಿಎಲ್ ಒ ಆ್ಯಫ್ ನಲ್ಲಿ ದಾಖಲಿಸಲಾಗುತ್ತದೆ ಎಂದರು.
ದಿನಾಂಕ:05.08.2026 ರಂದು ಈ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರಡು ಮತದಾರರ ಪಟ್ಟಿಗೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಅಕ್ಟೋಬರ್ 3ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಕೊನೆಗೆ ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.
*ಜಿಲ್ಲೆಯಲ್ಲಿ 1,853 ಮತಗಟ್ಟೆ:* ಪ್ರಸ್ತುತ ರಾಯಚೂರು ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,853 ಮತಗಟ್ಟೆಗಳಿದ್ದು, ಒಟ್ಟು 17,22,279
ಮತದಾರರಿರುತ್ತಾರೆ. ಈ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹೊಪಾತ್ರ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್, ಸಿಂಧನೂರು ತಹಶೀಲ್ದರ್ ಅರುಣ್ ಕುಮಾರ್ ದೇಸಾಯಿ, ಚುನಾವಣಾ ಶಾಖೆಯ ಶಿರಸ್ತೇದಾರ್ ಋಷಿಕೇಶ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಇದ್ದರು.


Comments
Post a Comment