ರೈತರ ಹಿತ ಕಾಯಲು ಸರಕಾರ ಮುಂದಾಗಬೇಕು- ಡಾ. ಬಾಬುರಾವ್
ಜಯ ಧ್ವಜ ನ್ಯೂಸ್ ,ರಾಯಚೂರು,ಜೂ.11- ಮುಂಗಾರು ಆರಂಭವಾಗಿದ್ದು, ಸರಕಾರ ಕೂಡಲೇ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ಸಮರ್ಪಕವಾಗಿ ರಸಗೊಬ್ಬರವನ್ನು ಪೂರೈಸಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು , ಜಿಲ್ಲೆಯ ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರಗಳು ಲಭ್ಯವಾಗುತ್ತಿಲ್ಲ. ಕೆಲವು ಮಾರಾಟಗಾರರು ಲಭ್ಯವಿರುವ ಬೀಜ ಮತ್ತು ಗೊಬ್ಬರವನ್ನು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳನ್ನು ಎಂ.ಆರ್.ಪಿ. ದರದಲ್ಲಿ ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಹಾಗು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ರೈತರಿಗೆ ಸಮರ್ಪಕವಾಗಿ ಬೀಜ ಗೊಬ್ಬರ ದೊರೆಯುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ರೈತರಿಗೆ ಬೇಕಾದ ಗೊಬ್ಬರವನ್ನಷ್ಟೇ ಕೊಡುವಂತೆ ಸೂಚಿಸಬೇಕು. ರೈತರು ಕೊಳ್ಳುವ ಗೊಬ್ಬರದ ಜೊತೆ ಇತರ ಔಷಧಿ ಹಾಗೂ ಗೊಬ್ಬರಗಳನ್ನು ಲಿಂಕ್ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ

Comments
Post a Comment