ದೇಶಬಂಧು ಚಿತ್ತರಂಜನ್ ದಾಸ್ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆ -ಅಮರಜೀತ್ ಕುಮಾರ್

 

ಜಯ‌ ಧ್ವಜ ನ್ಯೂಸ್ , ರಾಯಚೂರು, ಜೂ.16- ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯ ವತಿಯಿಂದ ರಾಯಚೂರಿನ ಕಚೇರಿಯಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡ ದೇಶಬಂಧು ಚಿತ್ರಂಜನ್ ದಾಸ್ ಅವರ 100ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಚಿತ್ತರಂಜನ್ ದಾಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು ಮತ್ತು ಪ್ರಖ್ಯಾತ ವಕೀಲರಾಗಿದ್ದರು. ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಾಜಕೀಯ ಗುರುಗಳಾಗಿದ್ದರು. ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಅವರು ಅವಿಭಜಿತ ಬಂಗಾಳದಲ್ಲಿ 'ಸ್ವರಾಜ್ ಪಕ್ಷ'ವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಳಿಸದ ಮುದ್ರೆ ಒತ್ತಿದ ಅವರನ್ನು ಜನರು ಪ್ರೀತಿಯಿಂದ 'ದೇಶಬಂಧು'  ಎಂದು ಕರೆಯುತ್ತಿದ್ದರು.

​ ಅತ್ಯಂತ ಸಮರ್ಥ ಬ್ಯಾರಿಸ್ಟರ್ (ವಕೀಲ) ಆಗಿ, ಅವರು ಬ್ರಿಟಿಷರ ದೌರ್ಜನ್ಯದಿಂದ ಅನೇಕ ಕ್ರಾಂತಿಕಾರಿಗಳನ್ನು ರಕ್ಷಿಸಿದರು. ಅಲಿಪೋರ್ ಬಾಂಬ್ ಪಿತೂರಿ ಪ್ರಕರಣದಲ್ಲಿ ಅರವಿಂದ ಘೋಷ್ ಅವರ ಪರವಾಗಿ ವಾದ ಮಂಡಿಸಿ, ತಮ್ಮ ವಾಕ್ಚಾತುರ್ಯ ಮತ್ತು ಕಾನೂನು ಜ್ಞಾನದಿಂದ ಅವರನ್ನು ಮರಣದಂಡನೆ ಹಾಗೂ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದರು.


 ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಇಡೀ ಆಸ್ತಿ ಮತ್ತು ಜೀವನವನ್ನೇ ತ್ಯಾಗ ಮಾಡಿದರು. ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಗಾಂಧೀಜಿಯವರೊಂದಿಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅವರ ನಾಯಕತ್ವದಲ್ಲಿಯೇ ಒಟ್ಟಾಗಿ ಕೆಲಸ ಮಾಡಿದರು.

​1919ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ವಿಚಾರಣಾ ಸಮಿತಿಯ ಸದಸ್ಯರಾಗಿ ಪಂಜಾಬ್‌ಗೆ ಭೇಟಿ ನೀಡಿದರು. ಅಮೃತಸರ ಕಾಂಗ್ರೆಸ್ ಅಧಿವೇಶನದಲ್ಲಿ ಬ್ರಿಟಿಷ್ ಸರ್ಕಾರದ ಸುಧಾರಣೆಗಳಿಗೆ ಅಸಹಕಾರ ತೋರಲು ಮೊದಲ ಬಾರಿಗೆ ಪ್ರತಿಪಾದಿಸಿದರು.

​1921ರ ಅಸಹಕಾರ ಚಳವಳಿಯ ಸಮಯದಲ್ಲಿ ಬ್ರಿಟಿಷ್ ಬಟ್ಟೆಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಕ್ಕಾಗಿ ಪತ್ನಿ ಮತ್ತು ಮಗನೊಂದಿಗೆ ಜೈಲು ಪಾಲಾದರು. ಬ್ರಿಟಿಷ್ ರಾಜ್ ವಿರುದ್ಧ ಹೋರಾಡಲು 'ಫಾರ್ವರ್ಡ್' (ನಂತರ 'ಲಿಬರ್ಟಿ' ಎಂದು ಮರುನಾಮಕರಣ ಮಾಡಲಾಯಿತು) ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದರ ಸಂಪಾದಕತ್ವವನ್ನು ಸುಭಾಷ್ ಚಂದ್ರ ಬೋಸ್ ಅವರಿಗೆ ನೀಡಿದ್ದರು.

​ಸ್ವರಾಜ್ಯ ಪಕ್ಷದ ಸ್ಥಾಪನೆ (1922-23): ಅಸಹಕಾರ ಚಳವಳಿ ಹಿಂಪಡೆದ ನಂತರ, ಕೌನ್ಸಿಲ್ ಒಳಗೆ ಪ್ರವೇಶಿಸಿ ಬ್ರಿಟಿಷರನ್ನು ವಿರೋಧಿಸುವ ತಂತ್ರ ರೂಪಿಸಿದರು.

1923ರ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಜಯ ಗಳಿಸಿದಾಗ, ಚಿತ್ತರಂಜನ್ ದಾಸ್ ಅವರು ಕೋಲ್ಕತ್ತಾ ಕಾರ್ಪೊರೇಷನ್‌ನ ಮೊದಲ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.

​"ವರ್ಗಗಳಿಗಾಗಿ ಅಲ್ಲ, ಜನಸಾಮಾನ್ಯರಿಗಾಗಿ ಸ್ವರಾಜ್ಯ ಬೇಕು."  ಎಂದು ಸಿ.ಆರ್. ದಾಸ್ ಅವರು ಹೇಳುತ್ತಿದ್ದರು.  ಮಾತೃಭಾಷಾ ಮಾಧ್ಯಮದ ಶಿಕ್ಷಣವನ್ನು ಬೆಂಬಲಿಸಿದರು. ಮಹಿಳಾ ವಿಮೋಚನೆ, ಸ್ತ್ರೀ ಶಿಕ್ಷಣ ಮತ್ತು ವಿಧವಾ ಮರುವಿವಾಹಕ್ಕೆ ಬೆಂಬಲ ನೀಡಿದರು. "ನಿಮ್ಮಲ್ಲಿರುವ ಶಕ್ತಿಯನ್ನು ಕೇವಲ ಆಲೋಚನೆಗಳಿಗಾಗಿ ವ್ಯಯಿಸಬೇಡಿ, ಅದನ್ನು ದೇಶದ ಸೇವೆಯಲ್ಲಿ ಕ್ರಾಂತಿಕಾರಿ ಮತ್ತು ರಚನಾತ್ಮಕ ಕೆಲಸಗಳಿಗಾಗಿ ದಾರಿಯಿರಿ" ಎಂದು ಅವರು ಯುವಜನರಿಗೆ ಕರೆಯಿತ್ತಿದ್ದರು. 

ಅತ್ಯಂತ ಉದಾರವಾದಿಯಾಗಿದ್ದ ಅವರುಜೂನ್ 16, 1925 ರಂದು ದೇಶಬಂಧು ನಿಧನರಾದರು. ಅವರ ಪಾರ್ಥಿವ ಶರೀರವನ್ನು ರೈಲಿನಲ್ಲಿ ತರುವಾಗ ಪ್ರತಿ ನಿಲ್ದಾಣದಲ್ಲೂ ಸಹಸ್ರಾರು ಜನರು ಗೌರವ ಸಲ್ಲಿಸಿದರು. ಕೋಲ್ಕತ್ತಾದಲ್ಲಿ ನಡೆದ ಅವರ ಅಂತಿಮ ಯಾತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

​ಈ ಮಹಾನ್ ನಾಯಕ ದೇಶಬಂಧು ಚಿತ್ತರಂಜನ್ ದಾಸ್ ಅವರ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕಾಗಿದೆ ಎಂದರು.

ಇಂದು ದೇಶದಲ್ಲಿ ನಿರುದ್ಯೋಗ, ಬಡತನ, ಬೆಲೆ ಏರಿಕೆ, ಮಹಿಳೆಯರ ಮೇಲಿನ ಅಪರಾಧಗಳು ದಿನನಿತ್ಯ ಎಹೆಚ್ಚುತ್ತಿವೆ. ಕುಡಿತ, ಮಾದಕ ವ್ಯಸನ, ಡ್ರಗ್ಸ್ ಹಾವಳಿಗೆ ಯಾವುದೇ ನಿರ್ಬಂಧವಿಲ್ಲ. ಯುವಜನರ ನೈತಿಕ ಬೆನ್ನೆಲುಬು ಮುರಿಯುವ ಹುನ್ನಾರ ನಡೆದಿದೆ. ನೀತಿ ಮೌಲ್ಯಗಳ ಆಧಃಪತನ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ಚಿತ್ತರಂಜನ್ ದಾಸ್ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಕಟ್ಟುವುದು ಮಾತ್ರ ಪರಿಹಾರವಾಗಿದೆ. ಆದ್ದರಿಂದ ಯುವಜನತೆ ಒಂದು ಉನ್ನತ ಮೌಲ್ಯ, ನೀತಿ - ಸಂಸ್ಕೃತಿ ಮತ್ತು ವೈಚಾರಿಕತೆ ಆಧಾರದಲ್ಲಿ ಸಂಘಟಿತ ಹೋರಾಟ ಕಟ್ಟಲು ಮುಂದೆ ಬರಬೇಕು ಎಂದು ಕರೆ ನೀಡಿದರು. 

 ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶರಣಪ್ಪ ಉದ್ಬಾಳ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಕಾಲಿರುವ ಹುದ್ದೆಗಳ ಭರ್ತಿಗೆ ಯುವಜನರು ಹೋರಾಟಕ್ಕೆ ಮುಂದಾಗಬೇಕು ಎಂದರು. ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಎಐಡಿವೈಓ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸದಸ್ಯರು ಭಾಗವಹಿಸಿದ್ದರು.


 

Comments

Popular posts from this blog