ಜಿಲ್ಲಾಡಳಿತದಿಂದ ಡಾ.ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ:

ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ: ಡಾ.ಚನ್ನಬಸವಯ್ಯ ಹಿರೇಮಠ


ಜಯ ಧ್ವಜ ನ್ಯೂಸ್ ,ರಾಯಚೂರು, ಜು.2 - ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ಡಾ.ಫ.ಗು.ಹಳಕಟ್ಟಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕಾರರಾಗಿ ಆಗಮಿಸಿದ ರಾಯಚೂರಿನ ವಿಶ್ರಾಂತ ಪ್ರಾಂಶುಪಾಲರು ಹಾಗೂ ಸಂಶೋಧಕರಾದ ಡಾ.ಚನ್ನಬಸವಯ್ಯ ಹಿರೇಮಠ ಅವರು ಹೇಳಿದರು.

ಅವರಿಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.


ಒಂದು ವೇಳೆ ಶರಣ ಸಾಹಿತ್ಯದ ಕಡೆಗೆ ಲಕ್ಷ್ಯ ಹರಿಸದೇ ಇದ್ದರೆ ಇಂದು ನಮಗೆ ಶಿವಶರಣರ ವಚನಗಳು ದೊರಕುತ್ತಿರಲಿಲ್ಲ. ಕತ್ತಲ ಕಾಲ ಗರ್ಭದಲ್ಲಿದ್ದ ವಚನಗಳನ್ನು ಒಬ್ಬ ಸಾಮಾನ್ಯ ವಕೀಲರಾಗಿದ್ದುಕೊಂಡು ಶರಣರ ತತ್ವಾದರ್ಶಗಳು ಅವರೊಳಗಿದ್ದ ವೈಚಾರಿಕ ಮಾನವ ಪ್ರಜ್ಞೆಯನ್ನು ಎತ್ತಿ ತೋರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.

ಡಾ.ಫ.ಗು. ಹಳಕಟ್ಟಿಯವರು ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಪಡೆದರು. 1896ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದರು. ಮುಂಬೈ ಸೇಂಟ್ ಝೇವಿಯರ್ ಕಾಲೇಜಿನಿಂದ 1901ರಲ್ಲಿ ಬಿಎಸ್‌ಸಿ ದ್ವಿತೀಯ ದರ್ಜೆ, 1904ರಲ್ಲಿ ಎಲ್‌ಎಲ್‌ಬಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. 1904ರಲ್ಲಿ ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಜನಪ್ರಿಯ ವಕೀಲರಾದರು. 1923ರಲ್ಲಿ ವಿಜಾಪುರಕ್ಕೆ ಬಂದು ನೆಲೆಸಿದರು. ಅದೇ ವರ್ಷ ಅವರ ದಕ್ಷ ವಕೀಲಿ ವೃತ್ತಿ ನೆನೆದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೇಡರರೆಂದು ನೇಮಿಸಿತು ಎಂದರು.

1923ರಲ್ಲಿ ವಚನಶಾಸ್ತ್ರ ಸರ ಭಾಗ 1ಪ್ರಕಟವಾಯಿತು. ಈ ಕೆಲಸಕ್ಕೆ ಒಂದು ಸ್ವಂತ ಮುದ್ರಣಾಲಯ ಸ್ಥಾಪಿಸಬೇಕೆಂದು 1925ರಲ್ಲಿ ಇರುವ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಹಗಲಿರುಳು ಮುದ್ರಿಸಿದ ಪ್ರತಿ ಅಧ್ಯಯನ ಮಾಡಿ ತಿದ್ದಿ ತೀಡಿ ಮುದ್ರಣಕ್ಕೆ ಅಣಿಗೊಳಿಸುವ ಕಾರ್ಯ ಕೈಗೊಂಡರು ಎಂದರು.

ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ÷್ಣಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಪತ್ರಿಕಾ ಮಾಧ್ಯಮದಿಂದ ಏಕ ಕಾಲಕ್ಕೆ 2ಪತ್ರಿಕೆ ಸಂಪಾದಿಸಿ, ಪ್ರಕಟಿಸಿ ಜನಸಮೂಹದ ಜವಾಬ್ದಾರಿ ತಿಳಿಸುವ ಕಾರ್ಯಕ್ಕೆ ಕೈ ಹಾಕಿದರು. 1926ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಾವಾಯಿತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶಿಲ್ದಾರ್ ಪರಶುರಾಮ, ಹಿರಿಯ ಸಾಹಿತ್ಯ ವೀರಹನುಮಾನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಿಜಯರಾಜೇಂದ್ರ, ರಂಗಭೂಮಿಯ ಕಲಾವಿದ ವಿ.ಎನ್.ಹಕ್ಕಿ , ಕಲಾವಿದೆ ಪ್ರತಿಭಾ ಗೋನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

Comments

Popular posts from this blog