ಕ್ಲೈಮ್ಯಾಕ್ಸ್ ಹಂತಕ್ಕೆ ಸಂಪುಟ ವಿಸ್ತರಣೆ ಕಸರತ್ತು: ಜಿಲ್ಲೆಯಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನ. ಜಯ ಧ್ವಜ ನ್ಯೂಸ್, ರಾಯಚೂರು,ಜು.16- ರಾಜ್ಯ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು ದೆಹಲಿಯಲ್ಲಿ ಸಚಿವರ ಪಟ್ಟಿಗೆ ಹೈಕಮಾಂಡ್ ಅಂತಿಮ ಮುದ್ರೆ ಹಾಕುವ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ , ಪಕ್ಷದ ವರಿಷ್ಠರು ಆದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸೇರಿದಂತೆ ಪಕ್ಷದ ವರಿಷ್ಠರು ಚರ್ಚಿಸಿ ಸಚಿವರ ಲಿಸ್ಟ್ ಫೈನಲ್ ಮಾಡಲಿದ್ದಾರೆ. ಬಹುಷಃ ಒಂದು ವಾರದೊಳಗೆ ಸಂಪುಟ ವಿಸ್ತರಣೆಯಾಗುವುದು ಖಚಿತ ಎನ್ನಲಾಗಿದೆ. ಜಿಲ್ಲಾ, ಪ್ರಾದೇಶಿಕ, ಜಾತಿವಾರು, ವರ್ಚಸ್ಸು ಮತ್ತಿತರ ಮಾನದಂಡ ಅನುಸರಿಸಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿರ್ಧರಿಸಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿವಾಕಾಂಕ್ಷಿಗಳು: ಬಹುತೇಕ ಸಚಿವಾಕಾಂಕ್ಷಿ ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಹೈಕಮಾಂಡ್ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮೊದಲ ಹಂತದ ಸಂಪುಟ ರಚನೆ ವೇಳೆ ಕೈತಪ್ಪಿದ ಸಚಿವ ಸ್ಥಾನಕ್ಕಾಗಿ ಪಕ್ಷದ ಹಿರಿಯ ಶಾಸಕರು ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾದರು ಮತ್ತೊಮ್ಮೆ ಸಚಿವರಾಗಲು ಹೈಕಮಾಂಡ್ ಬಳಿ ಲಾಬಿ ನಡೆಸಿದ್ದು ಹೊಸದಾಗಿ ಸಚಿವರಾಗಬಯಸುವವರು ಸಹ ಪೈಪೊಟಿಗಿಳಿದಿದ್ದಾರೆ. ಹೊಸ ಮುಖಗಳು ಮತ್ತು ಯುವಕರು ಹಾಗೂ ವರ್ಚಸ್ವಿ ನಾಯಕರಿಗೆ ಮಣೆ ಹಾಕಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಜಿಲ್ಲೆಯಿಂದ ಯಾರಿಗೆ ಮಣೆ: ಜಿಲ್ಲೆಯಲ್ಲಿ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಬಸವನಗೌಡ ತುರವಿಹಾಳ, ಹಂಪನಗೌಡ ಬಾದರ್ಲಿ ಕಾಂಗ್ರೆಸ್ ನಿಂದ ಗೆದ್ದ ಶಾಸಕರಾಗಿದ್ದಾರೆ. ಎನ್.ಎಸ್.ಬೋಸರಾಜು, ಎ.ವಸಂತ ಕುಮಾರ್, ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬೋಸರಾಜು ಸಣ್ಣ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತೊಮ್ಮೆ ಅವರಿಗೆ ಸಚಿವ ಸ್ಥಾನ ಸಿಗುವುದೇ ಕಾದು ನೋಡಬೇಕಾಗಿದೆ . ಯುವಕರು ಮತ್ತು ಹೊಸ ಮುಖಗಳಿಗೆ ಮನ್ನಣೆ ದೊರೆಯಲಿದೆ ಎಂಬ ಮಾತು ಕೇಳಿಬರುತ್ತಿದ್ದು ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಕೆಲವೆ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

Comments
Post a Comment