ಹಿರಿಯ ಸಾಹಿತಿ ಬಿ.ಜಿ ಹುಲಿ ಜನ್ಮ ದಿನಾಚರಣೆ,  1 ಲಕ್ಷ 6೦ ಸಾವಿರ ರೂ ದೇಣಿಗೆ ಅರ್ಪಣೆ:

ಮಟಮಾರಿಯ ಶಿವಾನಂದ ಮಠದ ಸಾಮಾಜಿಕ ಕಳಕಳಿ ಶ್ಲಾಘನೀಯ -ಡಾ.ಹಂಪಣ್ಣ ಸಜ್ಜನ


ಜಯ ಧ್ವಜ ನ್ಯೂಸ್ ,ರಾಯಚೂರು,ಜು.22-

ಸಮಾಜದಲ್ಲಿನ ದುರ್ಬಲ ವರ್ಗದ ಮಕ್ಕಳಿಗೆ ಜ್ಞಾನ ಹಾಗೂ ಅನ್ನ ದಾಸೋಹದ ಮೂಲಕ ಮಠ ಮಾನ್ಯಗಳು ವಿಶಿಷ್ಠ ಕೊಡುಗೆ ನೀಡುತ್ತಿವೆ ಎಂದು ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಹೇಳಿದರು.

ರಾಯಚೂರಿನ ದಿ.ಸಾವಿತ್ರಿದೇವಿ.ಬಿ.ಹುಲಿ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಆಪ್ತ ನಿವೃತ್ತ ಸ್ನೇಹಿತರಿಗೆ ಸನ್ಮಾನ ಹಾಗೂ ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ ಅವರ 8೦ನೇ ವರ್ಷದ ಜನ್ಮ ದಿನದ ಹಿನ್ನೆಲೆಯಲ್ಲಿ ತಾಲೂಕಿನ ಮಟಮಾರಿಯ ಶ್ರೀ ಶಿವಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಯಚೂರು ನಗರದ ಬಸವ ಸೇವಾ ಪ್ರತಿಷ್ಠಾನದ ಬಸವ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಿವಾನಂದ ಮಠಕ್ಕೆ ತಲಾ 80 ಸಾವಿರ ರೂ. ದೇಣಿಗೆ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಟಮಾರಿಯ ಶ್ರೀ ಶಿವಾನಂದ ಮಠವು 80 ಕ್ಕೂ ಹೆಚ್ಚು ಅನಾಥ ಹಾಗೂ ಬಡ ಮಕ್ಕಳಿಗೆ ಉಚಿತ ವಸತಿ, ಊಟ, ಮತ್ತು ಶಿಕ್ಷಣ ನೀಡುತ್ತಿದೆ. ಇಂತಹ ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಿರುವ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದ ಅವರು, ಹಿರಿಯ ಸಾಹಿತಿಗಳಾದ ಬಿ.ಜಿ.ಹುಲಿ ಅವರ ಜನ್ಮದಿನವನ್ನು ಸಮಾಜಕ್ಕೆ ಮಾದರಿಯಾಗಿ ಆಚರಿಸಿಕೊಂಡು ಶಿಕ್ಷಣ, ದಾಸೋಹ ಪರಂಪರೆಗೆ ಪ್ರೋತ್ಸಾಹಿಸುವ ದೇಣಿಗೆ ನೀಡಿ ಒಂದು ಉತ್ತಮ ಸಂದೇಶ ಸಾರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಟಮಾರಿಯ ಶ್ರೀ ಸಿದ್ಧೇಶ್ವರ ವಿದ್ಯಾ ಸಂಸ್ಥೆ ಸಂಸ್ಥಾಪಕ ವೀರಯ್ಯ ಸ್ವಾಮಿ ಮಾತನಾಡಿ, ಅನಾಥ ಮತ್ತು ಬಡ ಮಕ್ಕಳ ಆಶ್ರಯದಾತ ಮಠಗಳ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು ಪ್ರೀತಿ ಮತ್ತು ಸಂಸ್ಕಾರದೊ0ದಿಗೆ ಮಕ್ಕಳನ್ನು ಬೆಳೆಸುವ ಕಾಯಕದಲ್ಲಿ ಮಠಗಳು ತೊಡಗಿಸಿಕೊಂಡಿವೆ ಎಂದು ಹೇಳಿದರು.

ಮಟಮಾರಿ ಶ್ರೀ ಶಿವಾನಂದ ಮಠದ ಸುಜ್ಞಾನಪಥ ಅನಾಥ ಮತ್ತು ಬಡಮಕ್ಕಳ ಜ್ಞಾನಭಾರತಿ ಶಾಲೆೆಯ ಪೂಜ್ಯರಾದ ಶ್ರೀ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ತಮ್ಮ ಮಠ ಆಧ್ಯಾತ್ಮಿಕ ಕೇಂದ್ರವಷ್ಟೆ ಅಲ್ಲ ಅನಾಥ ಮತ್ತು ಬಡ ಮಕ್ಕಳ ಪಾಲಿನ ನಿಜವಾದ ಆಶಾಕಿರಣವಾಗಿಸುವ ಉದ್ದೇಶ ಹೊಂದಿದೆ. ಜಾತಿ ಮತ ಬೇಧವಿಲ್ಲದೆ 80 ಕ್ಕೂ ಹೆಚ್ಚು ಬಡ ಮತ್ತು ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹ ನೀಡುತ್ತಿದೆ  ಎಂದು ಹೇಳಿದರು.

ಸುದ್ದಿಮೂಲ ಪತ್ರಿಕೆ ಸಂಪಾದಕರು ಮತ್ತು ಬಸವ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾದ ಬಸವರಾಜಸ್ವಾಮಿ ಮಾತನಾಡಿ, ಮಠಗಳು ಸಮಾಜದಲ್ಲಿನ ಧ್ವನಿ ಇಲ್ಲದ, ಆರ್ಥಿಕ ದುರ್ಬಲತೆಯಲ್ಲಿರುವವರಿಗೆ ಉಚಿತ ಶಿಕ್ಷಣ, ದಾಸೋಹದ ಜೊತೆಗೆ ಸಂಸ್ಕಾರ ಬದುಕು ಕಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.


ನಿವೃತ್ತ ಉಪನ್ಯಾಸಕರಾಗಿರುವ ಬಿ.ಜಿ.ಹುಲಿ ಅವರು ಜನ್ಮ ದಿನಾಚರಣೆ ಜೊತೆಗೆ ತಮ್ಮ ನಿವೃತ್ತ ಆಪ್ತ ಸ್ನೇಹಿತರಿಗೆ ಸನ್ಮಾನಿಸುವ ಮೂಲಕ ಸಮಾಜಕ್ಕೆ ಮಾದರಿ ನಡೆ ತೋರಿದ್ದಾರೆ. ಮಟಮಾರಿಯ ಈ ಮಠದಲ್ಲಿ ಬಡ ಜಾತ್ಯಾತೀತವಾಗಿರುವ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವುದರಿಂದ ತಮ್ಮ ಬಸವಶ್ರೀ ಶಾಲೆಗೆ   8೦ ಸಾವಿರ ರೂಪಾಯಿ ದೇಣಿಗೆಯನ್ನು ಶ್ರೀಮಠದ ಶೈಕ್ಷಣಿಕ ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಕೆ.ವೆಂಕಟೇಶ ಮಾತನಾಡಿ, ತಂದೆ-ತಾಯಿ ಅನಕ್ಷರಸ್ಥರಾಗಿದ್ದರು ಹಾಗಾಗಿ ತಾನು ಮಠದಲ್ಲೇ ಶಿಕ್ಷಣ ಪಡೆದಿದ್ದು ಮಠದ ಬಗ್ಗೆ ಸಾಕಷ್ಟು ಕಾಳಜಿ ಇರುವುದರಿಂದ ಮಠದ ಶ್ರೀಗಳ ಅಪ್ಪಣೆ ಮೇರೆಗೆ ನನ್ನ ಜನ್ಮದಿನವನ್ನು ಇದೇ ಮಠದಲ್ಲಿ ಆಚರಿಸುತ್ತೇನೆ ಎಂದು ಅವರು ತಿಳಿಸಿದರು. 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನಿವೃತ್ತ ಉಪನಿರ್ದೇಶಕಿ ಆರ್.ಇಂದಿರಾ ಮಾತನಾಡಿ, ದಿ.ಸಾವಿತ್ರಿದೇವಿ.ಬಿ.ಹುಲಿ ಅವರ ದಾಂಪತ್ಯ ಜೀವನವನ್ನು ಸತಿ-ಪತಿಗಳಲ್ಲೋಂದಾದ ಭಕ್ತಿ ಶಿವಗೊಪ್ಪುವುದು ಎಂಬ ವಚನದ ನುಡಿಯ ಮೂಲಕ ಪ್ರಶಂಸಿಸಿದರು. ಮಾದರಿಯಾದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಪ್ತ ನಿವೃತ್ತ ಸ್ನೇಹಿತರಿಗೆ ಸನ್ಮಾನ : ನಿವೃತ್ತ ಉಪನ್ಯಾಸಕರಾದ ಬಿ.ಜಿ.ಹುಲಿ ಅವರ ಆಪ್ತ ಸ್ನೇಹಿತರಾಗಿ ಸೇವಾ ನಿವೃತ್ತಿ ಹೊಂದಿದ ನಗರದ ಕೌಶಲ್ಯಾಭಿವೃದ್ಧಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಗ್ಯಾನಪ್ಪ ಯು.ಹುಡೇದ್, ಹಾಷ್ಮಿಯಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಹಿರಿಯ ಮುಖ್ಯ ಗುರುಗಳಾದ ಹಾಗೂ ಬೆಂಗಳೂರಿನ ಪ್ರದೇಶ ಕುರುಬರ ಸಂಘ ನಿರ್ದೇಶಕರಾದ ಮಹದೇವಪ್ಪ ಮಿರ್ಜಾಪುರ, ಪೊಲೀಸ್ ಕಾಲೋನಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಭಾರಿ ಪ್ರಾಂಶುಪಾಲ ಮಂಜುನಾಥ ಐಲಿ  ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ನಿವೃತ್ತ ಉಪನ್ಯಾಸಕರೂ ದಿ.ಸಾವಿತ್ರಿದೇವಿ.ಬಿ.ಹುಲಿ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಹಿರಿಯ ಸಾಹಿತಿಗಳಾದ ಬಿ.ಜಿ ಹುಲಿ ಪ್ರಾಸ್ತಾವಿಕ ಮಾತನಾಡಿದರು, ಕಲ್ಲೂರಿನ ಜಗದ್ಗುರು ಶ್ರೀ ಶಂಕರಾಚಾರ್ಯ ಮಠದ ಪೂಜ್ಯರಾದ ಶ್ರೀ ಶಿವರಾಮಾನಂದ ಭಾರತಿ ಸ್ವಾಮೀಜಿ ಹಾಗೂ ನಗರದ ಬಸವಾನಂದ ಶರಣರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.  ಜಿಲ್ಲಾ ಕುರುಬರ ಸಂಘ  ಅಧ್ಯಕ್ಷ ಗುಂಡಪ್ಪ ಸಾಹುಕಾರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಆರ್.ಕುರುಬರ ಸೇರಿದಂತೆ ಇತರರಿದ್ದರು. 

ಶಾಖವಾದಿಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಅನ್ನಪೂರ್ಣ ಪ್ರಾರ್ಥಿಸಿದರು, ಐಟಿಐ ಕಾಲೇಜಿನ ಪ್ರೊ.ಸದಾಶಿವಪ್ಪ ನಿರೂಪಿಸಿದರು, ನಿವೃತ್ತ ಬಿ.ಎಸ್.ಎನ್‌ಎಲ್ ಅಧಿಕಾರಿ ಸಿದ್ದಪ್ಪ ಸ್ವಾಗತಿಸಿದರು, ಭೀಮಯ್ಯ ವಂದಿಸಿದರು.

Comments

Popular posts from this blog