ಜಿಲ್ಲಾ ಮಟ್ಟದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶ:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೀರ್ಘಕಾಲದ ಸಹಭಾಗಿತ್ವ ಅಗತ್ಯ- ಜಿ.ಕುಮಾರ ನಾಯಕ
ಜಯ ಧ್ವಜ ನ್ಯೂಸ್ ,ರಾಯಚೂರು ಜು. 18 - ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಮಾತ್ರವಲ್ಲದೆ ವಿವಿಧ ಕಂಪನಿಗಳ ಪರಿಣತಿ, ಅನುಭವ, ತಾಂತ್ರಿಕ ಜ್ಞಾನ ಹಾಗೂ ಸಮಾಜದೊಂದಿಗೆ ದೀರ್ಘಕಾಲದ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಜಿ.ಕುಮಾರ್ ನಾಯಕ ಅವರು ಹೇಳಿದರು.
ಜುಲೈ 18ರ ಶನಿವಾರ ದಂದು ನಗರದ ಬಿಜನಗೇರಾ ರಸ್ತೆಯ ನವೋದಯ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಯಚೂರು ಮಹಾನಗರ ಪಾಲಿಕೆಯ ವತಿಯಿಂದ ರಾಯಚೂರು ಇಂಪ್ಯಾಕ್ಟ್ ಸಮ್ಮಿಟ್-2026ರ ಜಿಲ್ಲಾ ಮಟ್ಟದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ರಾಯಚೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ದಿನಗಳನ್ನು ಸ್ಮರಿಸಿದ ಅವರು, ಈ ಹಿಂದೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಸಾಕಷ್ಟು ಹಣದ ಕೊರತೆ ಇತ್ತು. ಆದರೆ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಕ್ಷಾಂತರ ಕೋಟಿ ರೂಪಾಯಿಗಳ ಬಜೆಟ್ ಹೊಂದಿದ್ದರೂ ಅಭಿವೃದ್ಧಿಯ ಎಲ್ಲ ಅಗತ್ಯಗಳನ್ನು ಪೂರೈಸಲು ಅದು ಸಾಕಾಗುತ್ತಿಲ್ಲ. ಆದ್ದರಿಂದ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.
ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಸಮಾಜದ ಅಭಿವೃದ್ಧಿಗೆ ಬಳಸುವ ಉದ್ದೇಶದಿಂದ ಸಿಎಸ್‌ಆರ್ ಅನುದಾನದ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ರಾಯಚೂರಿಗೆ ಕೇವಲ ಹಣ ನೀಡಿದರೆ. ಸಾಕಾಗುವುದಿಲ್ಲ. ಕಂಪನಿಗಳ ಪ್ರತಿನಿಧಿಗಳು ಜಿಲ್ಲೆಗೆ ಬಂದು ಇಲ್ಲಿನ ಜನರು, ಅಧಿಕಾರಿಗಳು ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ತಮ್ಮ ಪರಿಣತಿಯ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಲೋಕಸಭಾ ಸದಸ್ಯರು ಕರೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ದೇಶದ ಇತರೆ ಭಾಗಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಮಾದರಿಗಳು, ಸಹಕಾರ ಸಂಘಗಳು, ಹೈನುಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಉತ್ತಮ ಅನುಭವಗಳನ್ನು ರಾಯಚೂರಿಗೂ ತರಬೇಕು. ಈ ಅನುಭವ ಹಂಚಿಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂದರು.
ಶಾಲೆಗಳಲ್ಲಿ ಕಟ್ಟಡ, ತರಗತಿ ಕೊಠಡಿ ಅಥವಾ ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗದೆ. ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳ ಪ್ರೇರಣೆ, ಕೌಶಲ್ಯಾಭಿವೃದ್ಧಿ, ಆರೋಗ್ಯ ಹಾಗೂ ಜನರಿಗೆ ಪೂರಕವಾದ ಯೋಜನೆಗಳಿಗೂ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳಲ್ಲಿ ಇರುವ ಕೊರತೆಗಳನ್ನು ಗುರುತಿಸಿ ಅವುಗಳನ್ನು ಸಿಎಸ್‌ಆರ್ ಮೂಲಕ ತುಂಬುವ ಕೆಲಸವಾಗಬೇಕು ಎಂದರು.
ನಮಗೆ ನಿಮ್ಮ ಹಣ ಮಾತ್ರ ಬೇಕಿಲ್ಲ. ನಿಮ್ಮ ಕೌಶಲ್ಯ, ಅನುಭವ, ಸಹಾನುಭೂತಿ ಹಾಗೂ ಸಮಾಜಮುಖಿ ಮನೋಭಾವವೂ ಬೇಕಿದೆ. ಕಂಪನಿಗಳು ರಾಯಚೂರಿನೊಂದಿಗೆ ದೀರ್ಘಕಾಲದ ಪಾಲುದಾರಿಕೆಯನ್ನು ಬೆಳೆಸಿದರೆ ಅದರ ಲಾಭ ಮುಂದಿನ ಪೀಳಿಗೆಗೂ ಸಿಗಲಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಪೂವಿತಾ.ಎಸ್ ಅವರು ಮಾತನಾಡಿ, ರಾಯಚೂರು ಜಿಲ್ಲೆಯನ್ನು ಮಹಾತ್ವಾಕಾಂಕ್ಷೆ ಜಿಲ್ಲೆಯೆಂದು ಗುರುತಿಸಲ್ಪಟ್ಟಿದೆ. ಪ್ರೊ.ಎಂ.ಗೋವಿಂದ ರಾವ್ ಸಮಿತಿ ತನ್ನ ಸಮಗ್ರ ಸಂಯೋಜಿತ ಅಭಿವೃದ್ಧಿ ಸೂಚ್ಯಂಕ ಆಧಾರದ ವರದಿಯಲ್ಲಿ ರಾಯಚೂರು ಜಿಲ್ಲೆಯನ್ನು ಮಾನವ ಅಭಿವೃದ್ಧಿಯ ವಿವಿಧ ಸೂಚ್ಯಂಕಗಳಲ್ಲಿ ನಿರಂತರ ಹಿನ್ನಡೆ ಹೊಂದಿರುವ ಜಿಲ್ಲೆ ಎಂದು ಗುರುತಿಸಿದೆ. ಇದಕ್ಕೂ ಮುನ್ನ ಡಾ.ಡಿ.ಎಂ.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಹ ಸಮಗ್ರ ಸಾಮಾಜಿಕ-ಆರ್ಥಿಕ ಹಾಗೂ ಮೂಲಸೌಕರ್ಯ ಸೂಚ್ಯಂಕಗಳ ಆಧಾರದ ಮೇಲೆ ರಾಯಚೂರು ಜಿಲ್ಲೆಯನ್ನು ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿ ವರ್ಗೀಕರಿಸಿತ್ತು. ಜಿಲ್ಲೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸಿಎಸ್‌ಆರ್ ನಿಧಿಯ ಅಗತ್ಯತೆ ತುಂಬಾ ಇದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಜೀವನೋಪಾಯ, ಜಲ ಸಂರಕ್ಷಣೆ ಹಾಗೂ ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಮತ್ತು ಸವಾಲುಗಳಿವೆ. ನಾಗರಿಕ ಸಮಾಜ ಹಾಗೂ ಸಮುದಾಯಗಳ ಸಹಭಾಗಿತ್ವದಿಂದಲೇ ಶೀಘ್ರ ಪರಿವರ್ತನೆ ಸಾಧ್ಯವಾಗುತ್ತದೆ. ಸಿಎಸ್‌ಆರ್ ಸಂಸ್ಥೆಗಳ ಆದ್ಯತೆ ಮತ್ತು ಜಿಲ್ಲೆಯ ಅಗತ್ಯಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಈ ವೇಳೆ ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅವರು ಮಾತನಾಡಿ, ದೇಶದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಶೇ.75ರಷ್ಟು ಕೈಗಾರಿಕಾ ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲೇ ಖರ್ಚಾಗುತ್ತಿದೆ. ಆದರೆ ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡಿದರೆ ಅದರ ಸಾಮಾಜಿಕ ಪರಿಣಾಮ (ಸಿಎಸ್‌ಆರ್) ಐದು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.
ರಾಯಚೂರು ಮಹಾನಗರದಲ್ಲಿ 35 ಕೊಳಚೆ ಪ್ರದೇಶಗಳಿದ್ದು, ಅಲ್ಲಿನ ಜನರು ಬಹುಪೀಳಿಗೆಯ ಬಡತನ, ಮೂಲ ಸೌಕರ್ಯಗಳ ಕೊರತೆ ಹಾಗೂ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಮಾರ್ಟ್ ತರಗತಿ ಕೊಠಡಿಗಳು, ಕೆರೆಗಳ ಪುನರುಜ್ಜೀವನ, ಸ್ವಚ್ಛ ಪರಿಸರ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಸ್‌ಆರ್ ಸಂಸ್ಥೆಗಳು ಕೈಜೋಡಿಸುವಂತೆ ಅವರು ಹೇಳಿದರು.
ಕಿರು ವಿಡಿಯೋ ಪ್ರದರ್ಶನ: ಇದಕ್ಕೂ ಮುಂಚೆ ವಿವಿಧ ಕಂಪನಿಯ ಪ್ರತಿನಿಧಿಗಳಿಗೆ ಜಿಲ್ಲೆಯ ಮಾಹಿತಿ ನೀಡುವ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ಇತಿಹಾಸ ಮತ್ತು ಐತಿಹಾಸಿಕ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರದ ಅಭಿವೃದ್ಧಿಯ ಕುರಿತು ಕಿರು ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು.
ವಿವಿಧ ಗಣ್ಯರಿಂದ ಪ್ರಶಂಸಾ ಪತ್ರ ವಿತರಣೆ: ರಾಯಚೂರು ಇಂಪ್ಯಾಕ್ಟ್ ಸಮ್ಮಿಟ್-2026ರ ಅಂಗವಾಗಿ ಕಾರ್ಪೂರೇಟ್ ಸಂಸ್ಥೆಗಳು ಮತ್ತು ಅಭಿವೃದ್ಧಿ ಪಾಲುದಾರರಿಗೆ ಪ್ರಶಂಸಾ ಪತ್ರವನ್ನು ವಿವಿಧ ಗಣ್ಯರಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ, ನವೋದಯ ಶಿಕ್ಷಣ ಸಂಸ್ಥೆಯ ರಿಜಿಸ್ಟಾರ್ ಡಾ.ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಕಂಪನಿಗಳ ಪ್ರತಿನಿಧಿಗಳು ಇದ್ದರು.


Comments
Post a Comment