ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು- ಶಾಸಕ ಬಸನಗೌಡ ದದ್ದಲ್
ಜಯ ಧ್ವಜ ನ್ಯೂಸ್ , ರಾಯಚೂರು. ಜು. 4-
ರಾಯಚೂರು ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳು ಹಾಗೂ ಮೂರು ಮಹತ್ತರವಾದ ಐಲೆಂಡುಗಳು ಇವೆ. ಇಲ್ಲಿಗೆ ಕರ್ನಾಟಕ. ಮಹಾರಾಷ್ಟ್ರ. ತೆಲಂಗಾಣ ಸೇರಿದಂತೆ ಇತರೆ ಹಲವಾರು ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಹೇಳಿದರು
ಅವರು ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳ ಅಭಿವೃದ್ದಿ ಪರಿಶೀಲನೆ ಭಾಗವಾಗಿ ಕುರುಗಡ್ಡೆ ದತ್ತಾತ್ರೆಯ ದೇವಸ್ಥಾನ ಬಳಿ ನಡೆದ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗಳೊಂದಿಗೆ ಮಾತನಾಡಿದರು.
ಇಂದು ನಾವು ಎಲ್ಲರೂ ಒಂದಾಗಿ ಸೇರಿದ್ದೇವೆ. ಮಾಧ್ಯಮದವರನ್ನು ಕೆಲವು ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಕರೆದಿದ್ದೇನೆಂದ ಅವರು. ಕಳೆದ ಎಂಟು ವರ್ಷಗಳಿಂದ ನಾನು ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯನ್ನು ನೀವು ಸ್ವತಃ ನೋಡಿ, ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು ಎಂಬುದು ನಾನು ತಮಗೆಲ್ಲರಿಗೂ ಕರೆದ ಉದ್ದೇಶ ಆಗಿದೆ.
ನಮ್ಮ ಕ್ಷೇತ್ರದಲ್ಲಿ ಅತ್ಯಂತ ಪವಿತ್ರವಾದ ಹಾಗೂ ಅಪಾರ ಪ್ರವಾಸೋದ್ಯಮ ಸಾಮರ್ಥ್ಯ ಹೊಂದಿರುವ ಅನೇಕ ಸ್ಥಳಗಳಿವೆ. ವಿಶೇಷವಾಗಿ ಮೂರು ದ್ವೀಪಗಳು (ಐಲ್ಯಾಂಡ್‌ಗಳು) ನಮ್ಮ ಕ್ಷೇತ್ರದ ವಿಶಿಷ್ಟ ಆಕರ್ಷಣೆಗಳಾಗಿವೆ. ಇಂತಹ ಪ್ರಕೃತಿ ಮತ್ತು ಧಾರ್ಮಿಕ ವೈಶಿಷ್ಟ್ಯ ಹೊಂದಿರುವ ಸ್ಥಳಗಳು ಬೇರೆಡೆ ಇದ್ದಿದ್ದರೆ, ಆ ಭಾಗವು ಇಂದು ನೂರಾರು ಕೋಟಿ ರೂಪಾಯಿಗಳ ಪ್ರವಾಸೋದ್ಯಮ ಆದಾಯ ಗಳಿಸುತ್ತಿತ್ತು.
ಕರಾವಳಿ ಭಾಗ ಹಾಗೂ ಮೈಸೂರು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ನೀಡಿರುವ ಉತ್ತೇಜನವನ್ನು ನಾವು ನೋಡಿದ್ದೇವೆ. ನಮ್ಮ ಭಾಗದಲ್ಲಿಯೂ ಅದಕ್ಕಿಂತ ಕಡಿಮೆ ಅವಕಾಶಗಳಿಲ್ಲ. ಜುರಾಲಾ ಅಣೆಕಟ್ಟು, ಕೃಷ್ಣಾ ನದಿಯ ನೀರಿನ ಸೌಂದರ್ಯ ಹಾಗೂ ಧಾರ್ಮಿಕ ಕ್ಷೇತ್ರಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ಆದ್ದರಿಂದ ಈ ಭಾಗವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನ ಹಾಗೂ ವಿವಿಧ ಯೋಜನೆಗಳ ಮೂಲಕ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಅಡಿಯಲ್ಲಿ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಅವಕಾಶವಿದೆ. ಈ ಯೋಜನೆಯಡಿ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರು, ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳು, ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗಗಳು ಹಾಗೂ ಇತರೆ ಅಗತ್ಯ ಸೌಕರ್ಯಗಳನ್ನು ನಿರ್ಮಿಸಲು ಅವಕಾಶ ದೊರೆಯುತ್ತದೆ.
ನಮ್ಮ ಕ್ಷೇತ್ರದ ಪವಿತ್ರ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.


Comments
Post a Comment