ಮದ್ಯ ಮಾರಾಟವನ್ನು ನೇರವಾಗಿ ಸರ್ಕಾರವೇ ನಡೆಸಲಿ – ಅರುಣ್ ಭೂಪಾಲ್ ಜಯ ಧ್ವಜ ನ್ಯೂಸ್ , ರಾಯಚೂರು ,ಜು. 18: ಕರ್ನಾಟಕದಲ್ಲಿ ಖಾಸಗಿ ಆಧಾರಿತ ಮದ್ಯ ಮಾರಾಟ ವ್ಯವಸ್ಥೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಆಂಧ್ರ ಪ್ರದೇಶ ಮಾದರಿಯಲ್ಲಿ ಸರ್ಕಾರವೇ ನೇರವಾಗಿ ಮದ್ಯ ಮಾರಾಟ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ, ವಕೀಲರು ಹಾಗೂ ಪ್ರಶ್ನೆ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅರುಣ್ ಭೂಪಾಲ್ ರಾಜ್ಯ ಸರ್ಕಾರಕ್ಕೆ ಸಮಗ್ರ ನೀತಿಯ ಮನವಿಪತ್ರ ಸಲ್ಲಿಸಿದ್ದಾರೆ.
ಮನವಿಪತ್ರದಲ್ಲಿ ತಿಳಿಸಿದಂತೆ, ಪ್ರಸ್ತುತ ಖಾಸಗಿ ವ್ಯವಸ್ಥೆಯಿಂದ ಸರ್ಕಾರಕ್ಕೆ ಸಿಗಬೇಕಾದ ಆದಾಯದ ದೊಡ್ಡ ಭಾಗ ಖಾಸಗಿ ವಲಯಕ್ಕೆ ಹೋಗುತ್ತಿದೆ ಎಂದು ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೇರವಾಗಿ ಮದ್ಯ ಮಾರಾಟ ನಡೆಸಿದರೆ ವಾರ್ಷಿಕ ಆದಾಯದಲ್ಲಿ ಗಣನೀಯ ಹೆಚ್ಚಳ ಸಾಧ್ಯವೆಂದು ಅಂದಾಜಿಸಲಾಗಿದೆ.
ಪ್ರಸ್ತುತ ಸರ್ಕಾರಕ್ಕೆ ಸುಮಾರು ₹30,000–40,000 ಕೋಟಿ ಆದಾಯ ಲಭಿಸುತ್ತಿದ್ದು, ರಾಜ್ಯದ ಒಟ್ಟು ಮದ್ಯ ಮಾರುಕಟ್ಟೆ ₹70,000–80,000 ಕೋಟಿಗಳಷ್ಟಿದೆ ಎಂದು ಹೇಳಲಾಗಿದೆ. ಸರ್ಕಾರ ನೇರ ಮಾರಾಟ ವ್ಯವಸ್ಥೆ ಅಳವಡಿಸಿಕೊಂಡರೆ ವಾರ್ಷಿಕ ಆದಾಯ ₹45,000–55,000 ಕೋಟಿಗೆ ಏರಬಹುದು ಹಾಗೂ ₹10,000–15,000 ಕೋಟಿ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಳ್ಳಾರಿ ಜಿಲ್ಲೆಯಂತಹ ಗಣಿ ಹಾಗೂ ಕಾರ್ಮಿಕ ಆಧಾರಿತ ಪ್ರದೇಶಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಹೆಚ್ಚು ಇರುವುದರಿಂದ, ಸರ್ಕಾರದ ನೇರ ನಿಯಂತ್ರಣದ ಪೈಲಟ್ ಯೋಜನೆಯನ್ನು ಇದೇ ಜಿಲ್ಲೆಯಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರಮುಖ ಬೇಡಿಕೆಗಳು:
ಬಳ್ಳಾರಿ ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಘೋಷಿಸಬೇಕು, ಸರ್ಕಾರದ ಮಾಲಿಕತ್ವದ ಮದ್ಯ ಅಂಗಡಿಗಳು ಆರಂಭಿಸಬೇಕು, ಖಾಸಗಿ ಲೈಸೆನ್ಸ್‌ಗಳನ್ನು ಹಂತ ಹಂತವಾಗಿ ಮರುಪರಿಶೀಲಿಸಬೇಕು ಅಥವಾ ರದ್ದುಪಡಿಸಬೇಕು, ರಾಜ್ಯ ಮಟ್ಟದ ಬೆವರೇಜ್ ಕಾರ್ಪೊರೇಷನ್ ಮೂಲಕ ನಿರ್ವಹಣೆ ಮಾಡಬೇಕು, ಸಂಪೂರ್ಣ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು.
ಈ ವ್ಯವಸ್ಥೆಯ ಪ್ರಯೋಜನಗಳ ಜೊತೆಗೆ ಸವಾಲುಗಳನ್ನೂ ಉಲ್ಲೇಖಿಸಲಾಗಿದೆ. ಸರ್ಕಾರಿ ನಿಯಂತ್ರಣದಿಂದ ಬೆಲೆ, ಗುಣಮಟ್ಟ ಹಾಗೂ ಮಾರಾಟ ಸಮಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಅಕ್ರಮ ಮದ್ಯ ಮಾರಾಟ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಸರ್ಕಾರಕ್ಕೆ ಹೆಚ್ಚುವರಿ ಆಡಳಿತಾತ್ಮಕ ಹೊರೆ, ಸಿಬ್ಬಂದಿ ಹಾಗೂ ಮೂಲಸೌಕರ್ಯ ವೆಚ್ಚ, ಕಳ್ಳಬಜಾರ್ ಮತ್ತು ಭ್ರಷ್ಟಾಚಾರದಂತಹ ಸವಾಲುಗಳು ಎದುರಾಗುವ ಸಾಧ್ಯತೆಯೂ ಇದೆ .
ಈ ಕಾರಣದಿಂದ ರಾಜ್ಯವ್ಯಾಪಿ ಜಾರಿಗೆ ಮುನ್ನ ಬಳ್ಳಾರಿ ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಪೈಲಟ್ ಯೋಜನೆ ಅನುಷ್ಠಾನಗೊಳಿಸಿ, ಅದರ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಪ್ರಕಟಣೆ ಮೂಲಕ ಕೋರಲಾಗಿದೆ.


Comments
Post a Comment