ಭಾರತ ಜೋಡೋ ಯಾತ್ರೆ ಅಂಗವಾಗಿ ಸೆ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ: ಬಿಜೆಪಿಗೆ ಮೂರು ವರ್ಷದ ಬಳಿಕ ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ.
ಭಾರತ ಜೋಡೋ ಯಾತ್ರೆ ಅಂಗವಾಗಿ ಅ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ: ಬಿಜೆಪಿಗೆ ಮೂರು ವರ್ಷದ ಬಳಿಕ ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ. ರಾಯಚೂರು,ಸೆ.12- ಭಾರತ ಜೋಡೊ ಯಾತ್ರೆ ಅಂಗವಾಗಿ ಅ.22 ಮತ್ತು 23 ರಂದು ಜಿಲ್ಲೆಗೆ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ್ ಗಾಂಧಿಯವರು ಬಿಜೆಪಿಯ ದುರಾಡಳಿತ ಹಾಗೂ ಭಾರತವನ್ನು ಒಡೆಯುತ್ತಿರುವ ಬಿಜೆಪಿ ವಿರುಧ್ಧ ಸುಮಾರು 5 ತಿಂಗಳುಗಳ ಕಾಲ 3500 ಕಿ.ಮಿ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಪಾದಯಾತ್ರೆ ಸಾಗಲಿದ್ದು ರಾಜ್ಯದಲ್ಲಿ ಸುಮಾರು 510 ಕಿ.ಮಿ ಕ್ರಮಿಸಲಿದ್ದು ಜಿಲ್ಲೆಯ ನಗರ ಕ್ಷೇತ್ರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಎರೆಡು ದಿನಗಳ ಕಾಲ ಸುಮಾರು 50 ಕಿ.ಮಿ ಪಾದಯಾತ್ರೆ ಮಾಡಲಿದ್ದು ಜನ ಸಾಮಾನ್ಯರು, ರೈತರು, ಬೀದಿ ಬದಿ ವ್ಯಾಪಾರಸ್ಥರು, ಶ್ರಮಿಕರೊಂದಿಗೆ ಸಂವಾದ ನಡೆಸಲಿದ್ದಾರೆಂದರು. ಕಲಬುರ್ಗಿ, ಬೀದರ್, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆಂದರು. ಬಿಜೆಪಿ ಸರ್ಕಾರ ಈಗ ಮೂರು ವರ್ಷದ ಬಳಿಕ ಜನಸ್ಪಂದನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಇಷ್ಟು ದಿನ ಬಿಜೆಪಿಗೆ ಜನರ ಬಗ್ಗೆ ಸ್ಪಂದನೆ ಏಕೆ ಬರಲಿಲ್ಲವೆಂದರು. ನಮ್ಮ ಸರ್ಕಾರದ ಅವಧಿಯ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡಿಸುತ್ತೇವೆನ್ನುತ್ತಾರೆ ಬಿಜೆಪಿಯ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲವೆಂದ ಅವರು ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕರು ಐರನ್ ಲೆಗ್ ಎನ್ನುತ್ತಾರೆ ಅವರು ಕಬ್ಬಿಣ ಇದ್ದಹಾಗೆ ಭಾರತವನ್ನು ಜೋಡಿಸುವ ಕಬ್ಬಿಣದ ಸೂಜಿಯಾಗುತ್ತಾರೆ ಹೊರತು ಇಭ್ಭಾಗ ಮಾಡುವ ಕತ್ತರಿಯಾಗಲಾರರು ಎಂದರು. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಭಾರತ ಶಾಂತಿಯ ತೋಟ ಬಿಜೆಪಿ ಅದನ್ನು ಹಾಳುಗೆಡವುತ್ತಿದೆ ಎಂದರು. ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಯಾರಬೇಕಾದವರನ್ನು ಭೇಟಿಯಾಗಲಿ ಅವರ ಅನೂಕೂಲವೆಂದ ಅವರು ಬಿ.ವೈ.ವಿಜಯೇಂದ್ರ ಪಕ್ಷದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಾರೆಂದರು. ಪಿಎಸ್ ಐ ಹಗರಣದಲ್ಲಿ ಕನಕಗಿರಿ ಶಾಸಕ ಬಸವರಾಜ ದಡೆಸಗೂರು ಲಂಚ ಪಡೆದಿರುವ ಬಗ್ಗೆ ಬಹಿರಂಗವಾಗಿದ್ದು ಅವರಿಗೆ ವಿಚಾರಣೆಗೆ ಕರೆಯಿಸಿ ಕಾನೂನು ಕ್ರಮಕೈಗೋಳ್ಳಬೇಕೆಂದ ಅವರು ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆಂದರು. ಕೆಪಿಸಿಸಿ ಅಧ್ಯಕ್ಷರ ಚುನಾವಣೆ ಶೀಘ್ರವೆ ನಡೆಯಲಿದೆ ಎಂದ ಅವರು ಸಿದ್ದರಾಮಯ್ಯ ಭಾವಚಿತ್ರ ಬ್ಯಾನರ್ ನಲ್ಲಿ ಇಲ್ಲದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅದನ್ನೆ ಏಕೆ ದೊಡ್ಡದಾಗಿ ಬಿಂಬಿಸುತ್ತೀರಿ ಎಂದು ಜಾರಿಕೊಂಡರು. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ಗೊಂದಲವಿಲ್ಲ ಎಲ್ಲರು ಹೈಕಮಾಂಡ್ ಆದೇಶಕ್ಕೆ ಬದ್ಧರು ಎಂದರು. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮಾಜಿ ಸಚಿವರಾದ ಹೆಚ್.ಆಂಜೀನೇಯ್ಯ , ಶರಣಪ್ರಕಾಶ ಪಾಟೀಲ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಶಾಸಕರಾದ ದದ್ದಲ ಬಸನಗೌಡ, ಡಿ.ಎಸ್.ಹೂಲಗೇರಿ, ಬಸನಗೌಡ ತುರವಿಹಾಳ, ಮಾಜಿ ಶಾಸಕರಾದ ಸೈಯದ್ ಯಾಸೀನ, ಹಂಪನ್ ಗೌಡ ಬಾದರ್ಲಿ, ಹಂಪಯ್ಯ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್, ಮುಖಂಡರಾದ ಪಾರಸಮಲ್ ಸುಖಾಣಿ, ಯಂಕಣ್ಣ ಯಾದವ, ಬಸನಗೌಡ ಬಾದರ್ಲಿ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಜಯಣ್ಣ, ಅಮರೇಗೌಡ ಹಂಚಿನಾಳ,ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರಿದ್ದರು.

Comments
Post a Comment