ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಸಾಸಂ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ
ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಸಾಸಂ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ
ರಾಯಚೂರು, ಮೇ 23: ಇತ್ತೀಚೆಗೆ ರಾಯಚೂರು ವಿಶ್ವವಿದ್ಯಾಲಯದ ಕೃಷ್ಣತುಂಗ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದಿಂದ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್.ಎಸ್.ಹೊಸಮನಿಯವರು ಮಾತನಾಡಿ, ಮೊಬೈಲ್ ಹಾಗೂ ಕಂಪ್ಯೂಟರ್ ಇಂಟರ್ನೆಟ್ ಹೆಚ್ಚಾಗಿ ಬಳಕೆಯಲ್ಲಿರುವ ಇಂದಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ಪುಸ್ತಕಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಇದನ್ನು ಗಮನಿಸಿ ಜನರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಡಿಜಿಟಲೀಕರಣ(ಇ-ಬುಕ್ಸ್) ಮಾಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಒಟ್ಟು 2 ಕೋಟಿಗೂ ಅಧಿಕ ಗ್ರಂಥಗಳನ್ನು ಡಿಜಿಟಲ್ ಮಾಡುವ ಕೆಲಸವನ್ನು ಮಾಡಲಾಗಿದ್ದು, ಸದ್ಯ 3.42 ಕೋಟಿಗೂ ಅಧಿಕ ಓದುಗರು ನೋಂದಣಿ ಮಾಡಿಕೊಂಡಿರುವುದು ಇಲಾಖೆಯ ಹೆಮ್ಮೆಯಾಗಿದೆ. ಅತ್ಯಂತ ವೇಗವಾಗಿ ಗಮನಾರ್ಹ ಪ್ರಮಾಣದ ಓದುಗರನ್ನು ಸಂಪಾದಿಸಿದಕ್ಕಾಗಿ ವರ್ಡ್ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ತಮ್ಮ ಸಾಧನೆ ದಾಖಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜ್ಞಾನವೇ ಶಕ್ತಿ ಹಾಗಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಬರೆಯುವ ಹವ್ಯಾಸವನ್ನೂ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹಾಗೂ ಅದರಲ್ಲಿ ಉತ್ತಮ ಸಾಧನೆ ತೋರಲು ತಮ್ಮ ಓದು ಸಹಾಯ ಮಾಡುತ್ತದೆ. ಇ-ಗ್ರಂಥಾಲಯಗಳ ಬಳಕೆ ಸೇರಿದಂತೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ನಮ್ಮನ್ನು ಉನ್ನತ ಸ್ಥಾನಮಾನಕ್ಕೆ ಕೊಂಡೊಯ್ಯುತ್ತದೆ ಎಂದು ಕಿವಿಮಾತು ಹೇಳಿದರು(ಗೂಗಲ್ನಲ್ಲಿ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ ಎಂದು ಟೈಪ್ ಮಾಡುವ ಮೂಲಕ ಜಾಲತಾಣ ತಲುಪಬಹುದು).
ಕಾರ್ಯಕ್ರಮದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಾದ ಡಾ. ಶರಣಪ್ಪ ಚಲುವಾದಿ ಅವರು ಬರೆದಿರುವ 'ನಮ್ಮಂತೆ ನೀನೊಮ್ಮೆ ಒಡಲುಗೊಂಡು ನೋಡಾ' ಹಾಗೂ ಡಾ. ಮಂಜುನಾಥ.ಕೆ ಅವರು ಸಂಪಾದಿಸಿರುವ 'ನುಂಕೆಮಲೆ' (ಸಂಶೋಧನಾ ಲೇಖನಗಳ ಸಂಗ್ರಹ) ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಹಾಗೂ ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರು, ಒಬ್ಬ ನಟನಾಗಿ ದಿವಂಗತ ಡಾ. ರಾಜ್ ಕುಮಾರ್ ಮತ್ತು ಪ್ರಧಾನಿ ಹುದ್ದೆಗೇರುವ ಮೂಲಕ ಹೆಚ್.ಡಿ.ದೇವೇಗೌಡ ಅವರು ಕನ್ನಡದ ಹಿರಿಮೆ-ಗರಿಮೆಗಳನ್ನು ರಾಷ್ಟ್ರ ಹಾಗೂ ವಿಶ್ವ ಮಟ್ಟದಲ್ಲಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ನಾಡು-ನೆಲ-ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಕಾರ್ಯಚಟುವಟಿಕೆಗಳನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟಕರಾಗಿ ಭಾಗವಹಿಸಿದ್ದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಶ್ವನಾಥ್.ಎಂ ಅವರು ಮಾತನಾಡಿ, ಬರವಣಿಗೆ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಇರುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಪಕುಲಪತಿಗಳ ಆಶಯದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸಾರಂಗವನ್ನು ಪ್ರಾರಂಭಿಸಲಾಗಿದೆ. ಇದು ಸಾಹಿತ್ಯ ಹಾಗೂ ಸಂಶೋಧನಾ ಕೃಷಿಗೆ ಸಹಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಉಪಕುಲಸಚಿವ ಡಾ. ಜಿ.ಎಸ್.ಬಿರಾದಾರ್ ಅವರು ಮಾತನಾಡಿ, ಗುವಿವಿ ರಾಯಚೂರು ಸ್ನಾತಕೋತ್ತರ ಕೇಂದ್ರವಿದ್ದಾಗ ಸುಮಾರು 30 ವರ್ಷಗಳ ಹಿಂದೆ ಕನ್ನಡ ಅಧ್ಯಯನ ವಿಭಾಗ ಸ್ಥಾಪಿತವಾಗಿದ್ದು. ಪ್ರಾರಂಭದಿಂದ ಈವರೆಗೆ ಅನೇಕಾ ಕಾರ್ಯಚಟುವಟಿಕೆಗಳನ್ನು ವಿಭಾಗ ಮಾಡಿಕೊಂಡು ಬಂದಿದ್ದು, ರಾಯಚೂರು ವಿಶ್ವವಿದ್ಯಾಲಯ ಇದಕ್ಕೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ. ಶಿವರಾಜ್ ಯತಗಲ್ ನಿರೂಪಿಸಿದರು, ಪ್ರಾಸಾರಂಗದ ಸಂಯೋಜಕ ಡಾ. ಶರಣಪ್ಪ ಚಲುವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಶಿವಲೀಲಾ ಹವಾಲ್ದಾರ್ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ನುಸ್ರತ್ ಫಾತಿಮಾ, ವಿವಿಧ ವಿಭಾಗಗಳ ಡೀನ್'ಗಳಾದ ಪ್ರೊ. ಪಾರ್ವತಿ.ಸಿ.ಎಸ್, ಪ್ರೊ. ಪಿ.ಭಾಸ್ಕರ್, ರಾಯಚೂರು ಹಾಗೂ ಯಾದಗಿರಿ ವಿಭಾಗದ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ಮಾಡುವ ಜೊತೆಗೆ ಮದ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.


Comments
Post a Comment