ಶರಣರ ಚಿಂತನೆಗಳಲ್ಲಿ ಚಿರಂತನ ಮೌಲ್ಯ- ಸ್ಮಿತಾ ಅಕ್ಕ


ಶರಣರ ಚಿಂತನೆಗಳಲ್ಲಿ ಚಿರಂತನ ಮೌಲ್ಯ- ಸ್ಮಿತಾ ಅಕ್ಕ

ರಾಯಚೂರು, ಮೇ 22- ಮಹಾತ್ಮರು, ಶರಣರು ಅಯಾ ಕಾಲಘಟ್ಟದಲ್ಲಿ ನೀಡಿರುವ ಶ್ರೇಷ್ಠ ಸಂದೇಶಗಳ ಚಿರಂತನ ಮೌಲ್ಯಗಳೇ ಮಾನವ ಕುಲಕ್ಕೆ ಇಂದಿಗೂ ಮಾರ್ಗದರ್ಶನವನ್ನು ನೀಡುತ್ತ ಬಂದಿವೆ ಎಂದು‌ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ರಾಜಯೋಗಿನಿ ಸ್ಮಿತಾ ಅಕ್ಕನವರು  ನುಡಿದರು.        ಸ್ಥಳೀಯ ಕರ್ನಾಟಕ ಸಂಘದಲ್ಲಿ ಹಮ್ಮಿಕೊಂಡಿರುವ ‘ಶರಣ ಚಿಂತನ; ವಚನ ಮಂಥನ’ 3ನೇ  ಮಾಸಿಕ ಮಾಲಿಕೆಯಲ್ಲಿ ʼಅಕ್ಕಮಹಾದೇವಿ ಸಾಹಿತ್ಯʼ ಕುರಿತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.



ಎಷ್ಟೆಲ್ಲ ಸಾಧಕರ ಜೀವನ ಮತ್ತು ಅವರು ನೀಡಿರುವ ಅಲೊಚನೆಗಳನ್ನು ದೇಶದಲ್ಲಿ ಅಂದಂದೇ ಪಾಲಿಸುತ್ತ ಹೋಗಿದ್ದರೆ ನಾವು ಈಗ ಕಾಣುತ್ತಿರುವ ʼವಿಶ್ವಗುರುʼ ಕನಸು ಆಗಲೇ ನನಸಾಗಿರುವುದು ಎಂದು ಅವರು ಅಭಿಪ್ರಾಯ ಪಟ್ಟರು. ಇಲ್ಲಿನ ಶಾರದಾ ವಿದ್ಯಾ ನಿಕೇತನದ ಚಿತ್ರಕಲಾ ಶಿಕ್ಷಕಿ ಕುಮಾರಿ ನರಸಮ್ಮ ಅವರು ರಚಿಸಿದ ಅಕ್ಕಮಹಾದೇವಿ ಕಲಾಕೃತಿಯನ್ನು ಅನಾವರಣ ಮಾಡುವ ಮೂಲಕ ಅವರು ಮಾಲಿಕೆಯನ್ನು ಉದ್ಘಾಟಿಸಿದರು.


ಎಸ್‌ ಎಸ್‌ ಆರ್‌ ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ. ರಾಜೇಶ್ವರಿ  ವಿರಕ್ತಮಠ ಅವರು ಅಕ್ಕಮಹಾದೇವಿ ಅವರ ಜೀವನ ಮತ್ತು ವಚನ ಸಾಹಿತ್ಯದ  ವೈಶಿಷ್ಟ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಸದಸ್ಯರಾದ ಹಿರಿಯ ಸಾಹಿತಿ ಡಾ. ಶೀಲಾದಾಸ್‌ ಅವರು ಅಕ್ಕಮಹಾದೇವಿ ಅವರ ಅಧ್ಯಾತ್ಮದ ಆಳ ಮತ್ತು  ಅಂತರ್‌ ದೃಷ್ಟಿಯ ಕುರಿತು ವಿಶ್ಲೇಷಿಸಿದರು.


ಅಕ್ಕನ ಬಳದ ಅಧ್ಯಕ್ಷೆ  ಪಾರ್ವತಿ ಪಾಟೀಲ್‌ ಮತ್ತು ಬಸವ ಕೇಂದ್ರದ  ದೇವೇಂದ್ರಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.                       ಈ ಸಂದರ್ಭದಲ್ಲಿ ಕಲಾವಿದೆ ಕುಮಾರಿ ನರಸಮ್ಮ ಮತ್ತು ಡಾ. ರಾಜೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಂಘದ ಕಾರ್ಯದರ್ಶಿ  ಶ್ರೀನಿವಾಸ ಗಟ್ಟು ಸ್ವಾಗತಿಸಿದರು. ಶ ಯಶೋದಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.. ಕುಮಾರಿ ಅನ್ನಪೂರ್ಣ ಅವರಿಂದ ವಚನ ಗಾಯನ ಜರುಗಿತು.

ನಗರದ ಕರ್ನಾಟಕ ಸಂಘವು ಇಲ್ಲಿನ ಬಸವ ಕೇಂದ್ರ,, ಜಾಗತಿಕ ಲಿಂಗಾಯತ ಮಹಾಸಭಾ, ತಾಲೂಕು ಘಟಕ, ಅ.ಭಾ.ವೀರಶೈವ ಮಹಾಸಭಾ ಜಿಲ್ಲಾ ಘಟಕ, ಹಾಗೂ ಅಕ್ಕನ ಬಳಗ, ರಾಯಚೂರು ಅವರ ಸಂಯುಕ್ತ ಆಶ್ರಯದಲ್ಲಿ ಈ ಮಾಲಿಕೆಯನ್ನು ಸಂಘಟಿಸಿದೆ. 

Comments

Popular posts from this blog