371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಹಸ್ರಾರು ಜನರು
371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಹಸ್ರಾರು ಜನರು. ರಾಯಚೂರು,ಜೂ.15- ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಅನುಚ್ಛೇದ 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಸಹಸ್ರಾರು ಜನರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಸರ್ಕಾರಕ್ಕೆ ಒತ್ತಾಯಿಸಿದರು.
371(ಜೆ) ರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು , ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ಸರ್ಕಾರಕ್ಕೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರು ಮತ್ತು ಸಿಎಂಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನ ಹಸಿರು ಪ್ರತಿಷ್ಟಾನ 371ಜೆ ರದ್ದು ಮಾಡುವಂತೆ ಕೋರಿದ್ದನ್ನು ಖಂಡಿಸಲಾಯಿತು ಸರ್ಕಾರ ಶೀಘ್ರ ಒಂದು ಸಮಿತಿ ರಚಿಸಬೇಕು ಮತ್ತು 371ಜೆ ಸಮಗ್ರ ಮತ್ತು ಸಮರ್ಪಕ ಅನುಷ್ಠಾನಕ್ಕೆ ನಿಗಾವಹಿಸಬೇಕು ಅಲ್ಲದೆ ರಾಜ್ಯ ಮಟ್ಟದ ನೇಮಕದಲ್ಲಿ ಶೇ.8ರ ಬದಲಾಗಿ ಶೇ.20 ಮೀಸಲಾತಿ ನಿಗದಿಪಡಿಸಬೇಕು, ರಾಜ್ಯದ ಎಲ್ಲ ವಿವಿಗಳಲ್ಲಿ ಪಿಹೆಚ್ ಡಿ ಪ್ರವೇಶಕ್ಕೆ 371ಜೆ ಅಡಿ ಮಿಸಲಾತಿ ನೀಡಬೇಕು, ಕಲ್ಯಾಣ ಕರ್ನಾಟಕದಲ್ಲದವರು ಸಹ 371ಜೆ ಪ್ರಮಾಣ ಪತ್ರ ಪಡೆದು ದುರಪಯೋಗವಾಗುತ್ತಿದ್ದು ಅದನ್ನು ತಡೆಯಬೇಕು, ಏಳು ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕ 371ಜೆ ಅಡಿ ಮಾಡಬೇಕು ಸೇರಿದಂತೆ ಅನೇಕ ಒತ್ತಾಯಗಳನ್ನು ಮಾಡಲಾಯಿತು.
ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ತಾರಾನಾಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ದೇವಣ್ಣ ನಾಯಕ, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕಾರ್ಯಾಧ್ಯಕ್ಷ ಎನ್.ಶಿವಶಂಕರ , ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ,ಕೆಪಿಸಿಸಿ ಮಾಧ್ಯಮ ವಕ್ತಾರ ರಜಾಕ್ ಉಸ್ತಾದ್, ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಜೈನ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಜಲ್ದಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಕರ್ ರೆಡ್ಡಿ, ಮುಖಂಡರಾದ ಗಿರೀಶ್ ಕನಕವೀಡು, ರಾಜ ಕುಮಾರ್, ನಗರಸಭೆ ಸದಸ್ಯರಾದ ದರೂರು ಬಸವರಾಜ, ಪವನ್ ಕುಮಾರ್, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ್ ಯಾದವ್, ಎಸ್ಕೆಯಿಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ಬಾಬುರಾವ ಶೇಗುಣಸಿ, ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಆರ್.ಕೆ.ಅಮರೇಶ, ಭೀಮನಗೌಡ ಇಟಗಿ, ಸಾಮಾಜಿಕ ಕಾರ್ಯಕರ್ತ ಕೆ.ಇ.ಕುಮಾರ್, ಅಂಬಾಜಿರಾವ್, ಕೆ.ಜಿ.ವಿರೇಶ, ಡಿ.ಎಸ.ಶರಣಬಸವ, ಸೇರಿದಂತೆ, ರಾಯಚೂರು ವಕೀಲರ ಸಂಘ, ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಎಸ್.ಕೆ.ಇ ಪ್ಯಾರಾ ಮೆಡಿಕಲ್ ಕಾಲೇಜು, ಎಲ್ ವಿ ಡಿ, ಎಸ್ ಎಸ್ ಆರ್ ಜಿ ಮಹಿಳಾ ಕಾಲೇಜು ಇನ್ನಿತರ ಶಿಕ್ಷಣ ಸಂಸ್ಥೆಗಳು, ದಲಿತ ಪರ, ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಸಂಚಾರ ದಟ್ಟಣೆ: ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಬಸ್ಸು ಹಾಗೂ ಇತರೆ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು ಸ್ಟೇಶನ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂಧಿಸಲಾಗಿತ್ತು ವಾಹನ ಸವಾರರು ಪರದಾಡಿದರು. ಸೂಕ್ತ ಪೊಲೀಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

Comments
Post a Comment