ಫೆ. 21ರಂದು ರಾಷ್ಟ್ರೀಯ ಸಮಾವೇಶ – ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗವಹಿಸಲು ಮರೇಗೌಡ ಪಾಟೀಲ್  ಕರೆ


ಜಯ ಧ್ವಜ ನ್ಯೂಸ್ ,ರಾಯಚೂರು ,ಫೆ.18-

 ವೀರಶೈವ ಲಿಂಗಾಯತ ಸಮುದಾಯದ ಹಿತದೃಷ್ಟಿ ಇಟ್ಟುಕೊಂಡು ರಾಷ್ಟ್ರದಾದ್ಯಂತ ಪ್ರಾರಂಭಿಸಲಾಗಿರುವ ರಿಯಲ್ ಎಸ್ಟೇಟ್ ನೆಟ್ವರ್ಕ್‌ನ ಅಂಗವಾಗಿ ಇದೇ ತಿಂಗಳ 21ರಂದು ಬೆಂಗಳೂರಿನ ರಾಯಲ್ ಆರ್ಕಿಡ್ ರೆಸಾರ್ಟ್‌ನಲ್ಲಿ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ನ ರಾಯಚೂರು ಜಿಲ್ಲಾಧ್ಯಕ್ಷರಾದ ಮರೇಗೌಡ ಪಾಟೀಲ್  ತಿಳಿಸಿದ್ದಾರೆ.

ದೇಶ-ವಿದೇಶಗಳಿಂದ ಸಾವಿರಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ರಾಷ್ಟ್ರದ ವಿವಿಧ ಭಾಗಗಳಿಂದ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಪರಿಚಯ, ಅಭಿಪ್ರಾಯ ವಿನಿಮಯ ಮತ್ತು ಉದ್ಯಮ ವಿಸ್ತರಣೆಯ ಕುರಿತು ಚರ್ಚಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳು, ಕಾನೂನು ಸಂಬಂಧಿತ ಅಡೆತಡೆಗಳು ಹಾಗೂ ಮಾರುಕಟ್ಟೆ ಸ್ಥಿತಿಗತಿಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ನೆರವೇರಿಸಲಿದ್ದಾರೆ. ಶ್ರೇಷ್ಠ ಉದ್ಯಮ ರತ್ನ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿ ವಹಿಸಲಿದ್ದಾರೆ.

ಇದೇ ವೇಳೆ ರಾಷ್ಟ್ರದ ವಿವಿಧ ಭಾಗಗಳಿಂದ ಉದ್ಯಮಿಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ಸಮಾವೇಶಕ್ಕೆ ಮೆರಗು ನೀಡಲಿದ್ದಾರೆ ಎಂದು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog