ಹಿರಿಯ ಪತ್ರಕರ್ತ ದಿ. ಸೈಯದ್ ಅಶ್ರಫ್ ಕುಟುಂಬಕ್ಕೆ ರಾಯಚೂರು ರಿಪೋರ್ಟರ್ಸ ಗಿಲ್ಡ್ ನಿಂದ 1 ಲಕ್ಷ ರೂ. ನೆರವು:
ರಿಪೋರ್ಟರ್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ – ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್
ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.16- ಇತ್ತೀಚೆಗೆ ನಿಧನರಾದ ರಾಯಚೂರಿನ ಹಿರಿಯ ಪತ್ರಕರ್ತ ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಪತ್ರಕರ್ತರ ತುರ್ತು ನಿಧಿಯಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು.
ನಗರದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮೃತರ ಕುಟುಂಬಕ್ಕೆ 1 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಸಲೀಂ ಅಹ್ಮದ್ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಮೃತ ಪತ್ರಕರ್ತರ ಕುಟುಂಬಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪತ್ರಕರ್ತರು ಸಮಾಜದ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ತಪ್ಪುಗಳನ್ನು ತೋರಿಸುವುದಲ್ಲದೆ ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸರ್ಕಾರಕ್ಕೂ ಪತ್ರಕರ್ತರ ಅವಶ್ಯಕತೆ ಸದಾ ಇದೆ ಎಂದು ಹೇಳಿದರು.
ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ತುರ್ತು ನಿಧಿಗೆ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿ ಹಾಗೂ ಮಾಧ್ಯಮ ಸಲಹೆಗಾರರೊಂದಿಗೆ ಚರ್ಚೆ ನಡೆಸಲಾಗುವುದು. ಗಿಲ್ಡ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪತ್ರಕರ್ತರ ಹಿತಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಗಿಲ್ಡ್‌ನ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಸೈಯದ್ ಅಶ್ರಫ್ ವಾರಕ್ಕೆ ಒಂದೆರಡು ಬಾರಿ ಹೈದರಾಬಾದ್‌ಗೆ ತೆರಳಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಕೆಲಸದ ಒತ್ತಡದ ನಡುವೆಯೇ ಅವರು ನಿಧನರಾಗಿರುವುದು ದುಃಖದ ಸಂಗತಿ ಎಂದರು.
ನಗರದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು, ಅವರಿಗಾಗಿ ತುರ್ತು ನಿಧಿ, ಆರೋಗ್ಯ ವಿಮೆ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಷೀರುದ್ದಿನ್, ಮಹಮ್ಮದ್ ಶಾಲಂ, ಅಸ್ಲಂ ಪಾಷಾ, ರಜಾಕ್ ಉಸ್ತಾದ್, ರುದ್ರಪ್ಪ ಅಂಗಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಜಿಲ್ಲಾಧ್ಯಕ್ಷ ಆರ್.ಗುರುನಾಥ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.





Comments
Post a Comment