ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ರಾಯಚೂರಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ
ಜಯ ಧ್ವಜ ನ್ಯೂಸ್ , ರಾಯಚೂರು,ಫೆ.19- ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಡಾ. ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಈಗ ಹೈದರಾಬಾದ್ ಆಸ್ಪತ್ರೆಯಲ್ಲಿ ಗುಣಮುಖರಾಗಿದ್ದಾರೆ.
ಶ್ರೀಗಳು ಬುಧವಾರ ಬೆಳಿಗ್ಗೆ ತಿಂಥಣಿ ಬ್ರಿಜ್ ಸಮೀಪದ ಬಂಡೊಳ್ಳಿ ಗ್ರಾಮದಲ್ಲಿರುವ ಶ್ರೀ ಮಠದ ಉದ್ದೇಶಿತ ವಿದ್ಯಾಸಂಸ್ಥೆ ಮಾಡುವ ಸ್ಥಳಕ್ಕೆ ಭೆಟ್ಟಿ ನೀಡಿ ಸಮಾಜದ ಮುಖಂಡರೊಂದಿಗೆ ಸ್ಥಳ ವೀಕ್ಷಿಸಿ ಸಭೆ ಕೂಡ ಮಾಡಿದ್ದರು. ನಂತರ ಅಲ್ಲಿಯೇ ಇರುವ ಕನಕಗುರು ಪೀಠಕ್ಕೆ ತೆರಳಿ ಇತ್ತೀಚೆಗೆ ಲಿಂಗೈಕ್ಯರಾಗಿರುವ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ನಮನ ಸಲ್ಲಿಸಿ ಅಲ್ಲಿಂದ ಹಟ್ಟಿ ಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಿದ್ದರು.
ಬೆಳಿಗ್ಗೆ ಯಿಂದ ಗುರುಗಳು ಲವಲವಿಕೆಯಿಂದಲೇ ಇದ್ದರು. ಆದರೆ, ಹಟ್ಟಿಯಲ್ಲಿ ಲಘು ಹೃದಯಾಘಾತ ಉಂಟಾಗಿದ್ದರಿಂದ ತಕ್ಷಣವೇ ಅವರನ್ನು ರಾಯಚೂರಿನ ವಿಜಿ ಕುಲಕರ್ಣಿ ಹೃದಯ ಆಸ್ಪತ್ರೆಗೆ ಎಸ್ಕಾರ್ಟ್ ಸಹಾಯದೊಂದಿಗೆ ರಾತ್ರಿ 9 ಗಂಟೆ ವೇಳೆ ಸಮಯದಲ್ಲಿ ಆಗಮಿಸಿ ಸೇರಿಸಲಾಗಿತ್ತು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಕೆ.ಶಿವನಗೌಡ ನಾಯಕ ಅವರು ಮೊಬೈಲ್ ವೀಡಿಯೋ ಕಾಲ್ ಮೂಲಕ ಆಸ್ಪತ್ರೆಯ ವೈದ್ಯರಿಗೆ ಸಂಪರ್ಕಿಸಿ ಗುರುಗಳ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದ್ದಲ್ಲದೆ ಗುರುಗಳಿಗೂ ಕೂಡ ಧೈರ್ಯ ಹೇಳಿದರು.
ಶ್ರೀಗಳ ವಿಷಯ ಗೊತ್ತಾಗಿ ತಕ್ಷಣವೇ ವಿ.ಜಿ.ಕುಲಕರ್ಣಿ ಆಸ್ಪತ್ರೆಗೆ ಸಚಿವರಾದ ಎನ್.ಎಸ್.ಭೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ವಿ.ವಿ.ನಾಯಕ, ಕೆ.ಶಿವನಗೌಡ ನಾಯಕ ಅವರ ಮಾತೋಶ್ರೀ ಮಹಾದೇವಮ್ಮ ಅವರು ಆಗಮಿಸಿ ವೈದ್ಯರೊಂದಿಗೆ ಸಮಾಲೋಚಿಸಿ ಶ್ರೀಗಳಿಗೆ ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ರವಿ ಪಾಟೀಲ್, ವೆಂಕನಗೌಡ ಪಾಟೀಲ್, ರಘುವೀರ ನಾಯಕ, ಭಿಮರಾಯ ಹದ್ದಿನಾಳ, ಡಾ.ಹುಲಿನಾಯಕ, ಡಾ.ಶಾರದಾ ಹುಲಿನಾಯಕ, ಸಿಂಡಿಕೇಟ್ ಸದಸ್ಯ ಚನ್ನವಸವ ನಾಯಕ, ಮಲ್ಲಿಕಾರ್ಜುನ ನಾಯಕ, ಸಂದೀಪ ನಾಯಕ, ರಾಮು ನಾಯಕ, ಗಿರಿಯಪ್ಪನಾಯಕ, ಅಜಿತ ಸೇಟ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಅಜಿತ್ ಕುಲಕರ್ಣಿ, ಡಾ. ಬಸನಗೌಡ ಪಾಟೀಲ್, ಡಾ. ಬಸವರಾಜ್ ಪಾಟೀಲ್ ಕೊಪ್ಪೂರು ಹಾಗೂ ಡಾ. ಸುರೇಶ್ ಸಗರದ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ಮಧ್ಯರಾತ್ರಿಯಲ್ಲಿ ಸೇರಿಸಲಾಗಿದೆ. ಈಗ ಗುರುಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Comments
Post a Comment