ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆ: ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಯಲ್ಲಿ ಸಮರ್ಪಕವಾಗಿ ಪೂರೈಕೆಯಾಗಲಿ -ಜಿಲ್ಲಾಧಿಕಾರಿ ಪೂವಿತಾ. ಎಸ್
ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.26 -ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಬೀಜ ಮತ್ತು ರಸಗೊಬ್ಬರಗಳ ಕಂಪನಿಗಳ ಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ2026-27ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಗಳ ಕುರಿತು ಕೃಷಿ ಇಲಾಖೆ ಹಾಗೂ ಬೀಜ ಮತ್ತು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಮೇ 26ರವರೆಗೆ ಒಟ್ಟು 654 ಮಿಲಿ ಮೀಟರ್ ಮಳೆಯಾಗಿದ್ದು, ಇದರಲ್ಲಿ ಮಸ್ಕಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ.2026-27ನೇ ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆಯಂತಹ ಒಟ್ಟು 2,18,861ಹೆಕ್ಟರ್ ಗಳಷ್ಟು ಏಕದಳ ಧಾನ್ಯಗಳ ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದ್ದು, ತೊಗರಿ, ಹೆಸರು, ಉದ್ದು, ಅಲಸಂದಿಯಂತಹ ಒಟ್ಟು 1,50,000 ಹೆಕ್ಟರ್‌ಗಳಷ್ಟು ದ್ವಿದಳ ಧಾನಗಳ ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದೆ ಎಂದರು.ಶೇಂಗಾ, ಸೂರ್ಯಕಾಂತಿ, ಎಳ್ಳು, ಔಡಲಾ, ಗುರೆಳ್ಳು, ಅಗಸೆಯಂತಹ ಒಟ್ಟು 19,000 ಹೆಕ್ಟರ್ ಎಣ್ಣೆಕಾಳು ಬೆಳೆಗಳು ಹಾಗೂ ಹತ್ತಿ, ಕಬ್ಬು ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳ ಒಟ್ಟು 1,86,954 ಹೆಕ್ಟರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,87,350 ಹೆಕ್ಟರ್‌ನಷ್ಟು ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಯಾವುದೇ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸರಬರಾಜಿನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕಳಪೆ ಬೀಜ ವಿತರಿಸಿದ್ದಲ್ಲಿ ಕ್ರಮ:ರಾಯಚೂರು ಜಿಲ್ಲೆಯ ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಕೃಷಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನೀಡುತ್ತಿರಬೇಕು. ಬೇಡಿಕೆ ಪಟ್ಟಿಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಶೇಖರಿಸಿಟ್ಟಿರಬೇಕು. ಕಂಪನಿಗಳು ಉತ್ತಮವಾದ ಬಿತ್ತನೆ ಬೀಜಗಳು ಮತ್ತು ರಗೊಬ್ಬರಗಳನ್ನು ನೀಡಬೇಕು. ಒಂದು ವೇಳೆ ರೈತರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ವಿಚಾರವಾಗಿ ದೂರುಗಳು ಕೇಳಿಬಂದಲ್ಲಿ ಸಂಬಂಧಿಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಹೆಚ್ಚುವರಿ ರಸಗೊಬ್ಬರ ಬಳಕೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ಜಿಲ್ಲೆಯ ವಿವಿಧ ತಾಲೂಕಿನ ಯೂರಿಯಾ ಮಾರಾಟಗಾರರ ಅಂಗಡಿಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕಿಸಾನ್ ಆ್ಯಪ್ ಮೂಲಕ ಜಿಲ್ಲಾ ಮಟ್ಟದಲ್ಲಿ ಬಫರ್ಸ್ ಸ್ಟಾಕ್ ಅನ್ನು ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ ವಿತರಣೆಯನ್ನು ಮಾಡಬೇಕು. ಸಂಶಯಾಸ್ಪದ ವ್ಯಾಪಾರಿಗಳಿಗೆ ಶೋಕಾಸ್ ಮತ್ತು ಮಾರಾಟ ನಿಲುಗಡೆ ನೋಟಿಸ್ ನೀಡಿ, ಅವರ ವ್ಯಾಪಾರ ಪರವಾನಗಿಯನ್ನು ಸಹ ಅಮಾನತುಗೊಳಿಸಬೇಕು. ಕಂದಾಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ರಸಗೊಬ್ಬರ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿ, ಹೆಚ್ಚುವರಿ ರಸಗೊಬ್ಬರ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಈ ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಹಮ್ಮದ್ ಅಲಿ, ಕೃಷಿ ಇಲಾಖೆಯ ಉಪ ನಿರ್ದೇಶಕ ನಹಿಂ ಹುಸೇನ್, ಲಿಂಗಸುಗೂರು ಉಪ ಕೃಷಿ ನಿರ್ದೇಶಕ ಮುತ್ತುರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ತಿಮ್ಮಣ್ಣ, ರಾಯಚೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ದೀಪಾ ಕುಲಕರ್ಣಿ, ದೇವದುರ್ಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜಂಟಿ ನಿರ್ದೇಶಕ ಕಚೇರಿಯ ಕೃಷಿ ಅಧಿಕಾರಿ ಶರಣಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಬೀಜ ಹಾಗೂ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.



Comments
Post a Comment