126ನೇ ನೀರಾವರಿ ಸಲಹಾ ಸಮಿತಿ ಸಭೆ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡುವುದಿಲ್ಲ- ಶಿವರಾಜ ತಂಗಡಗಿ
ಜಯ ಧ್ವಜ ನ್ಯೂಸ್ ,ರಾಯಚೂರು, ಆ. 11- ರೈತರ ನೆಮ್ಮದಿಯೇ ನಮ್ಮ ನೆಮ್ಮದಿ. ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಸ್ಪಷ್ಟಪಡಿಸಿದರು.
ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಇಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಪೂರ್ವದಲ್ಲಿ ರೈತ ಮುಖಂಡರ ಸಲಹೆ ಪಡೆದು ಅವರು ಮಾತನಾಡಿದರು.
ಕೆಲ ಕಡೆಗಳಲ್ಲಿ ಮಳೆ ಆದಾಗ್ಯೂ ರಾಜ್ಯದಲ್ಲಿ ಬರದ ಛಾಯೆ ಇದೆ. 177 ತಾಲೂಕುಗಳಲ್ಲಿ ಬರದ ಪರಸ್ಥಿತಿ ಇದೆ. ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ನೀರು ಹರಿದು ಬಂದಿದೆ.
ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಇದೆ. ಸದ್ಯ ಈಗ 82 ಟಿಎಂಸಿ ನೀರು ಲಭ್ಯವಿದೆ. ಜಲಾಶಯದಲ್ಲಿನ ನೀರು ಲಭ್ಯತೆ ಸ್ಥಿತಿಗತಿ ಅರಿತು ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಲಹೆ ಪಡೆದುಕೊಂಡು ಕಾಲುವೆಗೆ ನೀರು ಹರಿಸಲು ಕಾಲಾವಕಾಶ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಚಿವರಾದ ಎನ್ ಎಸ್ ಬೋಸರಾಜು, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯ ನಾಯಕ, ಬಸನನಗೌಡ ತುರವಿಹಾಳ, ಡಾ.ಎಸ್.ಶಿವರಾಜ ಪಾಟೀಲ, ಅನ್ನಪೂರ್ಣ ತುಕಾರಾಮ, ಜೆ.ಎನ್ ಗಣೇಶ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ಕಾಡಾ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಅಧಿಕಾರಿ ಸದಸ್ಯರಾದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರರಾದ ಎಸ್ ಬಿ ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ
ಸತ್ಯ ನಾರಾಯಾಣ ಶೆಟ್ಟಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರಾದ ಚಾಮರಸ ಪಾಟೀಲ, ಶರಣಪ್ಪಗೌಡ್ರ, ಶಂಕರಗೌಡ್ರು ಸೇರಿದಂತೆ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ರೈತ ಮುಖಂಡರು ಇದ್ದರು.


Comments
Post a Comment