ಕಲ್ಯಾಣ ಕರ್ನಾಟಕದಲ್ಲಿ ಯುಪಿಎಸ್ ಸಿ ನಾಗರೀಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಒತ್ತಾಯ
ಜಯ ಧ್ವಜ ನ್ಯೂಸ್ , ರಾಯಚೂರು ,ಆ.12- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ ಸಿ) ಪರೀಕ್ಷಾ ಕೇಂದ್ರ ಇಲ್ಲದೇ ಇರುವದರಿಂದ ಈ ಭಾಗದ ಅಭ್ಯರ್ಥಿಗಳು ದೂರದ ಬೆಂಗಳೂರು ಅಥವಾ ಹೈದರಾಬಾದ್ ನಗರಕ್ಕೆ ಹೋಗಬೇಕಾಗುತ್ತದೆ, ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷಾ ಕೇಂದ್ರ ಇದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ಇರುವದು ತೊಂದರೆಯಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶವು ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಹೊಂದಿರುವ ಪ್ರದೇಶವಾಗಿದ್ದು, ಸುಮಾರು 1.26 ಕೋಟಿ ಜನಸಂಖ್ಯೆ ಹೊಂದಿರುತ್ತದೆ. ಇಲ್ಲಿನ ಅಭ್ಯರ್ಥಿಗಳು ದೂರದ ಪ್ರದೇಶಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳಿಗೆ ಹೋಗುವದು ಪ್ರಯಾಸದಾಯಕವಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶವು ಸಂವಿಧಾನದ ಅನುಚ್ಛೇದ 371J ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಇಲ್ಲಿ ಸಾಮಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಾಗಿ ಹಿಂದುಳಿದ ಪ್ರದೇಶವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಶೇಷವಾಗಿ ರಾಯಚೂರಿನಲ್ಲಿ ಒಂದು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಯು ಅವಶ್ಯಕವಾಗಿರುತ್ತದೆ ಎಂದು ಸಂಸದರಾದ ಜಿ.ಕುಮಾರ ನಾಯಕ ಕೋರಿದ್ದಾರೆ.

Comments
Post a Comment