ರಿಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಮನವಿ
ಜಯ ಧ್ವಜ ನ್ಯೂಸ್ , ರಾಯಚೂರು, ಆ.19- ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗಳಿಗೆ ತಕ್ಷಣ ಕಡಿವಾಣ ಹಾಕಿ – ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಆಗ್ರಹಿಸಿ ಮನವಿಪತ್ರ ಸಲ್ಲಿಸಿತು.
ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಲಭ್ಯತೆ, ತುರ್ತು ಚಿಕಿತ್ಸಾ ವಿಭಾಗ, ಔಷಧಿಗಳ ಪೂರೈಕೆ, ಸ್ವಚ್ಛತೆ, ಸ್ಕ್ಯಾನಿಂಗ್ ಸೇವೆ, ಬಿಲ್ಲಿಂಗ್ ವ್ಯವಸ್ಥೆ ಹಾಗೂ ಸಾರ್ವಜನಿಕ ಸೌಲಭ್ಯಗಳಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿತು.
ರಿಮ್ಸ್ ಆಸ್ಪತ್ರೆ ರಾಯಚೂರು ಜಿಲ್ಲೆಯ ಬಡ ಮತ್ತು ಸಾಮಾನ್ಯ ಜನರಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗೆ ಆಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಗುಣಮಟ್ಟದ, ಸಮಯೋಚಿತ ಹಾಗೂ ಸುರಕ್ಷಿತ ವೈದ್ಯಕೀಯ ಸೇವೆ ದೊರೆಯುವುದು ಅತ್ಯಗತ್ಯವಾಗಿದೆ. ಆದರೆ ಸಾರ್ವಜನಿಕರಿಂದ ಬಂದಿರುವ ದೂರುಗಳ ಪ್ರಕಾರ ಹಲವು ವಿಭಾಗಗಳಲ್ಲಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ .
ಕೆಲವು ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ವೈದ್ಯರು ನಿಯಮಿತವಾಗಿ ಲಭ್ಯವಿಲ್ಲದೆ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ವೈದ್ಯರು ಲಭ್ಯವಿರುತ್ತಾರೆ ಎಂಬ ದೂರುಗಳಿವೆ. ಮಧ್ಯಾಹ್ನದ ನಂತರ ಹಿರಿಯ ಹಾಗೂ ತಜ್ಞ ವೈದ್ಯರ ಲಭ್ಯತೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪಿಜಿ ವಿದ್ಯಾರ್ಥಿಗಳು ಮತ್ತು ಇಂಟರ್ನ್‌ಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ಅವಲಂಬಿತವಾಗಿದೆ ಎಂಬ ದೂರುಗಳಿರುವುದರಿಂದ, ಅರ್ಹ ಹಿರಿಯ ವೈದ್ಯರ ನಿರಂತರ ಮೇಲ್ವಿಚಾರಣೆ ಖಚಿತಪಡಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.
ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಿಗೆ ತಕ್ಷಣ ರೋಗನಿರ್ಣಯ ಮತ್ತು ಚಿಕಿತ್ಸೆ ದೊರೆಯುವಂತೆ ಅನುಭವ ಹೊಂದಿರುವ ಅರ್ಹ ವೈದ್ಯರು ಸದಾ ಲಭ್ಯವಿರಬೇಕು. ತುರ್ತು ವಿಭಾಗದಲ್ಲಿ ಸಮರ್ಪಕ ವೆಂಟಿಲೇಶನ್ ಇಲ್ಲದೆ ದುರ್ವಾಸನೆ ಹಾಗೂ ಅಸ್ವಚ್ಛ ವಾತಾವರಣ ಉಂಟಾಗುತ್ತಿದೆ ಎಂಬ ದೂರುಗಳಿದ್ದು, ತಕ್ಷಣ ಸೂಕ್ತ ಗಾಳಿಯಾಟ ಮತ್ತು ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಆರ್ತೋಪೆಡಿಕ್ ವಿಭಾಗದಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಅಗತ್ಯ ಪರೀಕ್ಷೆಗಳನ್ನು ಮಾಡಿಕೊಡದೆ ಹೊರಗಡೆ ಎಕ್ಸ್‌ರೇ ಮಾಡಿಸಿಕೊಂಡು ಬರುವಂತೆ ಸೂಚಿಸಲಾಗುತ್ತಿದೆ ಎಂಬ ದೂರುಗಳಿದ್ದು, ಆಸ್ಪತ್ರೆಯಲ್ಲಿ ಲಭ್ಯವಿರುವ ಪರೀಕ್ಷಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ತಿಳಿಸಿದೆ.
ಗರ್ಭಿಣಿಯರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇವೆಯನ್ನು ಮಧ್ಯಾಹ್ನದವರೆಗೆ ಮಾತ್ರ ನಡೆಸಲಾಗುತ್ತಿದೆ ಹಾಗೂ ಬೇರೆ ಬೇರೆ ದಿನಗಳಲ್ಲಿ ಬರುವಂತೆ ಸೂಚಿಸಲಾಗುತ್ತಿದೆ ಎಂಬ ದೂರುಗಳಿವೆ. ಗರ್ಭಿಣಿಯರು ಅನಗತ್ಯವಾಗಿ ಹಲವು ಬಾರಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ, ಸಮರ್ಪಕ ಸ್ಕ್ಯಾನಿಂಗ್ ಮತ್ತು ಅಪಾಯಿಂಟ್‌ಮೆಂಟ್ ವ್ಯವಸ್ಥೆ ಕಲ್ಪಿಸಬೇಕು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿತು.
ಈ ಸಂದರ್ಭದಲ್ಲಿ ವೇದಿಕೆ ಸಂಚಾಲಕರಾದ ಅಮರೇಗೌಡ ಪಾಟೀಲ್, ಜೈ ಭೀಮ ವಲ್ಲಭ,ಶ್ರೀನಿವಾಸ್ ಕಲವಲದೊಡ್ಡಿ, ಪ್ರಸನ್ನ ಆಲಂಪಲ್ಲಿ, ವೀರೇಶ್ ಬಾಬು, ಬುಡ್ಡಪ್ಪ ಕೆ. (ಬಿಎಸ್‌ಪಿ), ಸಂತೋಷ್ ಕುಮಾರ್ ಮಿರ್ಜಾಪುರ್, ರಮೇಶ ಕಲ್ಲೂರ್ಕರ,ತಾಯಪ್ಪ ಗದರ್, ಮಹಮ್ಮದ್ ಇಸಾಕ್, ಶ್ರೀನಿವಾಸ್ ಜೋಶಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.


Comments
Post a Comment