ದೇವದುರ್ಗ ಚಿನ್ನ–ತಾಮ್ರದ ಗಣಿಗಾರಿಕೆ ಬ್ಲಾಕ್‌ಗೆ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಭೇಟಿ

ಜಯ‌ ಧ್ವಜ ನ್ಯೂಸ್ ,ರಾಯಚೂರು,ಆ.27-
ಕೇಂದ್ರ ಗಣಿ ಸಚಿವಾಲಯದ ಹರಾಜು ಪ್ರಕ್ರಿಯೆ ಮೂಲಕ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲರೀಸ್ ಕಂಪನಿ ಲಿಮಿಟೆಡ್‌ ನವರು  ಜಿಲ್ಲೆಯ ದೇವದುರ್ಗದಲ್ಲಿ ಚಿನ್ನ ಮತ್ತು ತಾಮ್ರದ ಬ್ಲಾಕ್‌ಗಳ ಪರಿಶೋಧನಾ ಪರವಾನಗಿ ಪಡೆದಿರುವ ಹಿನ್ನೆಲೆಯಲ್ಲಿ, ತೆಲಂಗಾಣದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಗುರುವಾರ ದೇವದುರ್ಗಕ್ಕೆ ಭೇಟಿ ನೀಡಿ ಸಿಂಗರೇಣಿ ಬ್ಲಾಕ್‌ನ ಪರಿಶೋಧನಾ ಪ್ರದೇಶವನ್ನು ಪರಿಶೀಲಿಸಿದರು.

ಚಿನ್ನ ಮತ್ತು ತಾಮ್ರದ ನಿಕ್ಷೇಪಗಳಿರುವ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಪರಿಶೋಧನಾ ಕಾರ್ಯದ ಪ್ರಗತಿ ಹಾಗೂ ಮುಂದಿನ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಗಣಿಗಾರಿಕೆ ಪ್ರದೇಶವನ್ನು ಪರಿಶೀಲಿಸಿದರು.
ನಿರ್ಣಾಯಕ ಖನಿಜಗಳ ಪರಿಶೋಧನಾ ಕ್ಷೇತ್ರಕ್ಕೆ ಸಿಂಗರೇಣಿ ಕಾಲರೀಸ್ ಕಂಪನಿ ಪ್ರವೇಶಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.


ನಂತರ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಮಾತನಾಡಿ, ಚಿನ್ನ ಹಾಗೂ ತಾಮ್ರ ಗಣಿಗಾರಿಕೆ  ಯೋಜನೆಯು ಸಿಂಗರೇಣಿ ಸಂಸ್ಥೆಯನ್ನು ಕಲ್ಲಿದ್ದಲು ಗಣಿಗಾರಿಕೆಯಾಚೆಗೆ ಹೊಸ ವಲಯಗಳಿಗೆ ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ. ಸಿಂಗರೇಣಿ ಕಾಲರೀಸ್ ಕಂಪನಿ ಲಿಮಿಟೆಡ್‌ ತೆಲಂಗಾಣ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಮಾಲೀಕತ್ವದ ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಯಾಗಿದ್ದು, ಇದೀಗ ಜಿಲ್ಲೆಯ ದೇವದುರ್ಗದಲ್ಲಿ ಚಿನ್ನ–ತಾಮ್ರದ ಪರಿಶೋಧನೆಗೆ ಮುಂದಾಗಿರುವುದು ರಾಯಚೂರು ಜಿಲ್ಲೆಯ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ ಎಂದು ರವಿ ಭೋಸರಾಜು ಅಭಿಪ್ರಾಯ ವ್ಯಕ್ತಪಡಿಸಿ ತೆಲಂಗಾಣ ಉಪ‌ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದರು.

ಕಲ್ಲಿದ್ದಲು ಗಣಿಗಾರಿಕೆಯಲ್ಲಿ 136 ವರ್ಷಗಳ ಅನುಭವ ಹೊಂದಿರುವ ಸಿಂಗರೇಣಿ ಸಂಸ್ಥೆ, ಚಿನ್ನ ಮತ್ತು ತಾಮ್ರ ಸೇರಿದಂತೆ ನಿರ್ಣಾಯಕ ಖನಿಜಗಳ ಪರಿಶೋಧನೆಯಲ್ಲಿಯೂ ತನ್ನ ಸಾಮರ್ಥ್ಯವನ್ನು ವಿಸ್ತರಿಸಲಿದೆ ಎಂದು ಭಟ್ಟಿ ವಿಕ್ರಮಾರ್ಕ ಹೇಳಿದರು.

ದೇವದುರ್ಗ ಪ್ರದೇಶದಲ್ಲಿ ಚಿನ್ನ ಮತ್ತು ತಾಮ್ರದ ನಿಕ್ಷೇಪಗಳ ಕುರಿತು ಸಿಂಗರೇಣಿಯ ಪರಿಶೋಧನಾ ವಿಭಾಗ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಪರಿಶೋಧನಾ ಚಟುವಟಿಕೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಕಾಂಗ್ರೆಸ್ ಮುಖಂಡರಾದ ನರಸಿಂಹಲು ಮಾಡಿಗಿರಿ, ರಾಮಣ್ಣ, ಇರುಬಗೇರ, ಚುಕ್ಕಿ ಶಿವಕುಮಾರ್ ಸೇರಿದಂತೆ ತಾಂತ್ರಿಕ ವಿಭಾಗದ ಅಧಿಕಾರಿಗಳು ಹಾಗೂ ಸಿಂಗರೇಣಿ ಕಂಪನಿಯ ಮುಖ್ಯಸ್ತರು ಉಪಸ್ಥಿತರಿದ್ದರು.

Comments

Popular posts from this blog