ಗಣೇಶ ಹಬ್ಬದ ಶಾಂತಿ ಪಾಲನಾ ಸಮಿತಿ ಸಭೆ: ರಾಜ್ಯಕ್ಕೆ ಮಾದರಿಯಾಗುವಂತೆ ಗೌರಿ–ಗಣೇಶ ಹಬ್ಬ ಆಚರಿಸಿ - ಜಿಲ್ಲಾಧಿಕಾರಿ ಪೂವಿತಾ
ಜಯ ಧ್ವಜ ನ್ಯೂಸ್ ,ರಾಯಚೂರು ಆ.6 - ಜಿಲ್ಲೆಯಲ್ಲಿ ಗೌರಿ–ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದಯುತವಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸುವದರ ಜೊತೆಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರೂ ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ತಾವೆಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಾಯಚೂರು ಜಿಲ್ಲೆಯು ಭಾವೈಕ್ಯತೆಗೆ ಹೆಸರು ಪಡೆದಿದೆ. ಎಲ್ಲ ಸಮಾಜದವರು ಭಾವೈಕ್ಯದಿಂದ ಈ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಮಂಡಳಿಗಳು ನಿಗಾವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ರಸ್ತೆ ಮಧ್ಯೆ ಗಣೇಶನ ಪ್ರತಿಷ್ಠಾಪನೆ ಮಾಡಿದರೆ ರಸ್ತೆ ಸುಗಮ ಸಂಚಾರಕ್ಕೆ ತೊಂದರೆಯಾಗಲಿದೆ. ಹೀಗಾಗಿ ರಸ್ತೆ ನಡುವೆ ಗಣೇಶನನ್ನು ಕೂಡಿಸುವುದು ಬೇಡ. ಗಣೇಶನ ಪ್ರತಿಷ್ಠಾಪನೆಗೆ ಪೂರ್ವ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿಗದಿತ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಗಣೇಶ ಮಂಡಳಿಯಿಂದ ಸ್ವಯಂ ಸೇವಕರು ಇರಬೇಕು. ಯಾವುದೇ ರೀತಿಯಲ್ಲಿ ಗಲಾಟೆಯಾಗದಂತೆ ಪರಸ್ಪರ ಸಹೋದರತ್ವದಿಂದ ಈ ಹಬ್ಬ ಆಚರಿಸಬೇಕು. ಪರವಾನಿಗೆ ಇಲ್ಲದೇ ಪೋಸ್ಟರ್, ಬ್ಯಾನರ್ ಅವಳಡಿಸಬಾರದು. ಆಗ್ನಿ ಅವಘಡದ ಕುರಿತು ಎಚ್ಚರಿಕೆ ವಹಿಸಬೇಕು. ರಾಯಚೂರು ಜಿಲ್ಲೆಯಲ್ಲಿ ಡಿಜೆ ಸೌಂಡ್ ಅನ್ನು ಕಡಿಮೆ ಪ್ರಮಾಣದಲ್ಲಿ ಇಡಬೇಕು. ರಾತ್ರಿ 10ಗಂಟೆಯೊಳಗಾಗಿ ಗಣೇಶ ವಿಸರ್ಜನೆ ಮಾಡಬೇಕು. ಪತ್ರಿ ಗಣೇಶ ಮಂಡಳಿಯಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಇಡಬೇಕು ಎಂದರು.
ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವ ಆಚರಣೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲೂ ಪಿಒಪಿ ಗಣೇಶ ಮೂರ್ತಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ರಾಯಚೂರು ನಗರದ ಜನತೆ ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ಪ್ರಭಾರಿ ಪರಿಸರ ಸಂರಕ್ಷಣಾಧಿಕಾರಿ ಗಿರೀಶ್ ಅವರು ಮಾತನಾಡಿ, ಪಿಒಪಿ ಸೇರಿದಂತೆ ವಿವಿಧ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಗಣೇಶ ಮೂರ್ತಿಗಳ ಬಳಕೆಯಿಂದ ಕೆರೆ, ನದಿ ಹಾಗೂ ಇತರೆ ಜಲಮೂಲಗಳಲ್ಲಿ ನೀರಿನ ಗುಣಮಟ್ಟ ಕುಸಿಯುತ್ತಿರುವುದು ಹಾಗೂ ಜಲಚರ ಜೀವಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಪಿಒಪಿ ಗಣೇಶ ಮೂರ್ತಿಗಳ ಸಂಗ್ರಹಣೆ, ಮಾರಾಟ, ವಿತರಣೆ ಹಾಗೂ ಸಾರ್ವಜನಿಕ ಪ್ರದರ್ಶನವನ್ನು ಅನುಮತಿಸಲಾಗುವುದಿಲ್ಲ. ಅಲ್ಲದೆ ವಿಷಕಾರಿ ಅಥವಾ ಭಾರ ಲೋಹಗಳನ್ನು ಒಳಗೊಂಡಿರುವ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಮೂರ್ತಿಗಳ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಈ ವೇಳೆ ಆಗ್ನಿ ಶಾಮಕದಳದ ಅಧಿಕಾರಿ ರವೀಂದ್ರ ಘಟಿಗಿ ಅವರು ಮಾತನಾಡಿ, ವಿವಿಧ ಗಣೇಶ ಮಂಡಳಿಯ ಮುಖಂಡರು ಆಗ್ನಿ ಅವಘಡದ ಕುರಿತು ಮುಂಜಾಗೃತಿ ವಹಿಸಬೇಕು. ಅಲ್ಲದೆ ಸರ್ಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಪಿಒಪಿ ಗಣೇಶಗಳನ್ನು ಆದ್ಯತೆ ನೀಡಿದೆ. ಮಣ್ಣಿನ ಗಣೇಶ ಮೂರ್ತಿ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದರು.
ರಾಯಚೂರು ಮಹಾನಗರ ಪಾಲಿಕೆಯ ಜೋನಲ್ -01ರ ಆಯುಕ್ತ ಮಲ್ಲಿಕಾರ್ಜುನ ಅವರು ಮಾತನಾಡಿ, ವ್ಯಾಪಾರಿಗಳು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬಾರದು. ಎಲ್ಲರೂ ಮಣ್ಣಿನ ಗಣೇಶ ಮೂರ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಿಒಪಿ ಗಣೇಶ ಮೂರ್ತಿಗಳು ರಾಯಚೂರು ನಗರಕ್ಕೆ ಬರದಂತೆ ನೋಡಿಕೊಳ್ಳಲು ರಾಯಚೂರು ಸುತ್ತಲೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ನಿಗ ವಹಿಸಲಿದ್ದಾರೆ. ಈ ಬಾರಿ ರಾಯಚೂರಿನಲ್ಲಿ ಸಂಪೂರ್ಣವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆಚರಣೆ ಮಾಡೋಣ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಂದಿತಾ ಎಮ್.ಎನ್.ಅವರು ಮಾತನಾಡಿ, ಎಲ್ಲಾ ಗಣೇಶ ಮಂಡಳಿಗಳು ಶುಚಿಯಾದ ನೀರು ಹಾಗೂ ಪ್ರಸಾದ್ ವನ್ನು ವಿತರಣೆ ಮಾಡಬೇಕು. ಹೆಚ್ಚಾಗಿ ಡ್ರೈ ಪ್ರಸಾದ್ ವಿತರಣೆಗೆ ಮಂಡಳಿಗಳು ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಸೇವೆ ಮಾಡಲಾಗಿದೆ. ಗಣೇಶ ಮಂಡಳಿಯವರು ಆರೋಗ್ಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಗಣೇಶ ಮಂಡಳಿಯ ಮತ್ತು ವಿವಿಧ ಸಂಘ, ಸಂಸ್ಥೆಯ ಮುಖಂಡರು, ಸಭೆಯಲ್ಲಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ತಹಶಿಲ್ದಾರ್ ಸುರೇಶ ವರ್ಮಾ, ರಾಯಚೂರು ಡಿವೈಎಸ್ಪಿ ಶಾಂತವೀರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಂದಿತಾ ಎಮ್.ಎನ್., ಸಿಪಿಐ ಉಮೇಶ್ ಕಾಂಬಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಮಾಜದ ಮುಖಂಡರು, ಗಜಾನನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




Comments
Post a Comment