ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು: ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ.
ಜಯ ಧ್ವಜ ನ್ಯೂಸ್ ,ರಾಯಚೂರು ಆಗಸ್ಟ್ 28 - ರಾಜ್ಯ ಸರ್ಕಾರವು ಅಲೆಮಾರಿ ನಿಗಮಕ್ಕೆ ಎಸ್‌ಸಿಪಿ ಅಡಿಯಲ್ಲಿ 100 ಕೋಟಿ ಹಾಗೂ ಟಿಎಸ್ಪಿ ಅಡಿಯಲ್ಲಿ 48 ಕೋಟಿ ವಿಶೇಷ ಅನುದಾನವನ್ನು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಕಾಯ್ದಿರಿಸುವ ಮೂಲಕ ಆ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲು ಅಲೆಮಾರಿ ಕೋಶವನ್ನು ಸ್ಥಾಪಿಸಲಾಯಿತು. ನಂತರ 2022ರಲ್ಲಿ ನಿಗಮವಾಗಿ, 2024ರಲ್ಲಿ ಪ್ರಥಮ ಬಾರಿಗೆ ಅಲೆಮಾರಿ ಸಮುದಾಯದ ಹೆಣ್ಣುಮಗಳಿಗೆ ನಿಗಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ ಎಂದರು.
ಕಂದಾಯ ಇಲಾಖೆಯ ಸಹಯೋಗದೊಂದಿಗೆ ಅಲೆಮಾರಿಗಳು ವಾಸಿಸುವ ಟೆಂಟ್ ಮತ್ತು ಗುಡಿಸಲುಗಳ ಬಳಿಗೆ ತೆರಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವ ಆದೇಶ ಜಾರಿಯಲ್ಲಿದೆ. ತುಮಕೂರು (8 ಎಕರೆ), ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 24 ಎಕರೆ ಭೂಮಿಯನ್ನು ನಿವೇಷನ ರಹಿತ ಅಲೆಮಾರಿಗಳಿಗಾಗಿ ಕಾಯ್ದಿರಿಸಲಾಗಿದೆ ಎಂದರು.
ರಾಯಚೂರು ಜಿಲ್ಲೆಯ ಸಿಂಧನೂರಿನ ಹಿರೇಲಿಂಗೇಶ್ವರ ಕಾಲೋನಿ ಮತ್ತು ಪಿರ್ಸಾಬ್ ಮನೆ ವ್ಯಾಪ್ತಿಯಲ್ಲಿ ಚರಂಡಿ, ಸಿಸಿ ರಸ್ತೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ 32.21 ಲಕ್ಷ ರೂ.ಗಳ ಅನುದಾನದಲ್ಲಿ ಕೆಲಸಗಳು ಪ್ರಗತಿಯಲ್ಲಿವೆ. ಅಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಶೇಕಡಾ 10 ರಷ್ಟು ಪ್ರವೇಶವನ್ನು ಯಾವುದೇ ಪ್ರವೇಶ ಪರೀಕ್ಷೆಯಿಲ್ಲದೆ. ನೇರವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣದಿಂದ ಮಾತ್ರ ಈ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಅಂದು ಕಾಡು-ನಾಡು ರಕ್ಷಣೆ ಮಾಡುತ್ತಿದ್ದ ಮೂಲ ನಿವಾಸಿಗಳು ಹಾಗೂ ಸ್ವತಂತ್ರ ಹೋರಾಟಕ್ಕೆ ನಾಂದಿ ಹಾಡಿದ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಸಮುದಾಯಗಳನ್ನು ಹತೋಟಿಯಲ್ಲಿಡಲು 1871ರಲ್ಲಿ ಬ್ರಿಟಿಷರು ಕ್ರಿಮಿನಲ್ ಟ್ರೈಬ್ಸ್ ಆಕ್ಟ್ (ಅಪರಾಧಿ ಬುಡಕಟ್ಟು ಕಾಯ್ದೆ) ಮತ್ತು ಫಾರೆಸ್ಟ್ ಆಕ್ಟ್ ಜಾರಿಗೆ ತಂದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ, ಈ ಸಮುದಾಯಗಳಿಗೆ 1952ರಲ್ಲಿ ಜವಾಹರಲಾಲ್ ನೆಹರೂ ಅವರಿಂದ ಸಾಂಕೇತಿಕವಾಗಿ ತಂತಿಬೇಲಿ ಕತ್ತರಿಸುವ ಮೂಲಕ ಸ್ವಾತಂತ್ರ್ಯ ಸಿಕ್ಕಿತು ಎಂದರು.
ಜನಗಣತಿಯಲ್ಲಿ ಭಾಗವಹಿಸಲು ಮನವಿ: ಕೇಂದ್ರ ಸರ್ಕಾರದಿಂದ ನಡೆಯಲಿರುವ ಜನಗಣತಿಯಲ್ಲಿ ಅಲೆಮಾರಿ ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಜನಸಂಖ್ಯೆಯ ಆಧಾರದ ಮೇಲೆಯೇ ಸರ್ಕಾರಿ ಸೌಲಭ್ಯಗಳು ಮತ್ತು ಗುರಿಗಳು ನಿಗದಿಯಾಗುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶ್ರೀ ನೂಲಿಯ ಚಂದಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಸೇರಿದಂತೆ ವಿವಿಧ ಗಣ್ಯರು ಶ್ರೀ ನೂಲಿಯ ಚಂದಯ್ಯನವರು ಜಯಂತಿ ಕಾರ್ಯಕ್ರಮದ ನಿಯಮಿತ್ಯ ನಗರದ ಕನ್ನಡ ಭವನದಲ್ಲಿ ಶ್ರೀ ನೂಲಿಯ ಚಂದಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ವೇಳೆ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಮಾತನಾಡಿ, 12ನೇ ಶತಮಾನದ ಅನುಭವ ಮಂಟಪವು ಪ್ರಪಂಚದ ಮೊದಲ ಪಾರ್ಲಿಮೆಂಟ್ ಇದ್ದಂತೆ. ಬಸವಾದಿ ಶರಣರು ಯಾವುದೇ ಕಾಯಕವಿರಲಿ ಪ್ರತಿಯೊಂದು ಶ್ರಮಕ್ಕೂ ಗೌರವ ನೀಡಿದ್ದರು. ಶರಣ ಶ್ರೀ ನೂಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿದರ್ಶನವಾಗಿದ್ದು, ತಮ್ಮ ಇಷ್ಟಲಿಂಗಕ್ಕಿಂತಲೂ ಕಾಯಕವೇ ಶ್ರೇಷ್ಠವೆಂದು ಮೆರೆದವರು ಎಂದರು.
ಇದೆ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂಗೇರಾ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಇಲಾಖೆ ಶಿವಮಾನಪ್ಪ, ಚೆನ್ನದಾಸರ ಸಮುದಾಯದ ರಾಜ್ಯ ಮುಖಂಡ ರಂಗಮುನಿದಾಸ, ಸಿಂಧೋಳು ಸಮುದಾಯದ ಮುಖಂಡ ಶ್ರೀನಿವಾಸ್ ಎಸ್.ಆರ್, ಅಖಿಲ ಕರ್ನಾಟಕ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಸಂಘಟನೆಗಳ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ಕುಳುವ ಮಹಾಸಂಘದ ಸದಸ್ಯರಾದ ಮಾಲಾ ಭಜಂತ್ರಿ, ರಾಮಪ್ಪ ಕೊರವರ, ರವಿ ಕುಮಾರ್, ಶಿವಾನಂದ ಭಜಂತ್ರಿ ಸೇರಿದಂತೆ ಇತರರು ಇದ್ದರು.



Comments
Post a Comment