ರಂಗಾಸಕ್ತರ ಗಮನ ಸೆಳೆದ 'ಸಣ್ಣ ಗೌಡಸಾನಿ'
ಜಯ ಧ್ವಜ ನ್ಯೂಸ್ , ರಾಯಚೂರು,ಆ.20- ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ, ವಿಶೇಷವಾಗಿ ವಿಧವೆಯರ ಮೇಲೆ ನಡೆಯುವ ಮಾನಸಿಕ ಹಾಗೂ ಸಾಮಾಜಿಕ ದೌರ್ಜನ್ಯಗಳನ್ನು ತೀವ್ರವಾಗಿ ಚಿತ್ರಿಸಿರುವ, ಪುರುಷಪ್ರಧಾನ ಸಮಾಜದ ಕಪಟತನವನ್ನು ಬಯಲು ಮಾಡುತ್ತಾ, ಒಬ್ಬ ಹೆಣ್ಣು ತನ್ನ ಆತ್ಮಗೌರವಕ್ಕಾಗಿ ನಡೆಸುವ ನಿರಂತರ ಹೋರಾಟವನ್ನು ಧ್ವನಿಸುವ ನಾಡೋಜಾ ಶಾಂತರಸರ ಕಥೆ ಆಧಾರಿತ 'ಸಣ್ಣ ಗೌಡಸಾನಿ' ನಾಟಕವನ್ನು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನ ನೀಡಲಾಯಿತು.
ಗ್ರಾಮೀಣ ಸಮಾಜದ ವಾಸ್ತವ ಚಿತ್ರಣ ಮತ್ತು ಜಾತಿ-ಲಿಂಗ ಆಧಾರಿತ ತಾರತಮ್ಯವನ್ನು ತೋರಿಸುತ್ತಾ, ಆತ್ಮಗೌರವ ಹಾಗೂ ಸ್ವಾಭಿಮಾನ ಉಳ್ಳ ಒಬ್ಬ ಮಹಿಳೆ ತಾನು ಮಾನಸಿಕವಾಗಿ ಸದೃಢಳಾಗಿದ್ದು ಇದೆಲ್ಲವನ್ನೂ ಹೇಗೆ ಸಹಿಸಿ-ಎದುರಿಸುತ್ತಾಳೆ ಎಂಬುದರ ಕಥಾಹಂದರದಿಂದ ಕೂಡಿರುವ ನಾಟಕವನ್ನು 'ಕಲಬುರಗಿ ರಂಗಾಯಣ' ಪ್ರಸ್ತುತಪಡಿಸಿದ್ದು, ಈ ಭಾಗದ ಪ್ರಸಿದ್ಧ ರಂಗಕರ್ಮಿಯಾದ ಪ್ರವೀಣ್ ರೆಡ್ಡಿ ಗುಂಜಹಳ್ಳಿಯವರ ನಿರ್ದೇಶನ, ಹೆಸರಾಂತ ಸಾಹಿತಿಗಳು ಹಾಗೂ ಕಥೆಗಾರರಾದ ಮಹಾಂತೇಶ್ ನವಲಕಲ್ ಅವರು ರಂಗರೂಪ ಹಾಗೂ ರಾಘವ ಕಮ್ಮಾರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದೆ. ನೆರಳು-ಬೆಳಕಿನ ಸಂಯೋಜನೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಭಾವನೆಗಳು ಮತ್ತು ಆಲೋಚನೆಗಳನ್ನು ಕೆದುಕುವಂತಿರುವ ಹಿನ್ನೆಲೆ ಸಂಗೀತ ಕಥೆ ಪ್ರೇಕ್ಷಕರ ಮನಮುಟ್ಟುವಂತೆ ಮಾಡುತ್ತದೆ.
ನಾಟಕ ಪ್ರದರ್ಶನಕ್ಕೂ ಮುಂಚೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ರಾಘವೇಂದ್ರ ಕುಷ್ಟಗಿಯವರು ಕಾರ್ಯಕ್ರಮದ ಉದ್ಘಾಟಕರಾಗಿ, ಹಿರಿಯ ಸಮಾಜಿಕ ಚಿಂತಕರಾದ ಬಸವರಾಜ ಕಳಸ ಅವರು ಕಾರ್ಯಕ್ರಮದ ಅಧ್ಯಕ್ಷರಾಗಿ, ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ, ಶಾಂತರಸರ ಪುತ್ರರಾದ ಬಸವಪ್ರಭು, ನಾಟಕಕಕ್ಕೆ ರಂಗರೂಪವನ್ನು ನೀಡಿರುವ ಮಹಂತೇಶ್ ನವಲ್ಕಲ್, ನಿರ್ದೇಶಕ ಪ್ರವೀಣ್ ರೆಡ್ಡಿ ಗುಂಜಳ್ಳಿ, ನಾಟಕ ಪ್ರದರ್ಶನಕ್ಕೆ ಸಹಯೋಗವನ್ನು ನೀಡಿರುವ ಮುಖಾಮುಖಿ ಸಂಸ್ಥೆಯ ಅಧ್ಯಕ್ಷರಾದ ವೇಣುಗೋಪಾಲ್ ಅವರು ಭಾಗವಹಿಸಿದ್ದರು. ಕಲಬುರಗಿ ರಂಗಾಯಣ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಹಾಗೂ ಮುಖಾಮುಖಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ನೆರೆದಿದ್ದ ಗಣ್ಯರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಇದೇ ನಾಟಕವು ಆ.18ರಿಂದ ಹಿಡಿದು ಆ.28ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರದರ್ಶನ ಕಾಣಲಿದ್ದು, ಕಾರ್ಯಕ್ರಮದ ಉದ್ಘಾಟಕರು ಹಾಗೂ ಅಧ್ಯಕ್ಷರು ಈ 'ನಾಟಕ ತಿರುಗಾಟ'ದ ಪ್ರಯೋಗಕ್ಕೆ ಶುಭ ಕೋರಿದರು. ಜಿಲ್ಲೆಯ ಅನೇಕ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಪತ್ರಕರ್ತರು, ಅಧ್ಯಾಪಕರನ್ನು ಒಳಗೊಂಡಂತೆ ರಂಗಾಸಕ್ತರು ಭಾಗವಹಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಿದರು.


Comments
Post a Comment