ಪಡ್ಡೆ ಹುಡುಗರ ಅಡ್ಡೆಯಾಗುತ್ತಿರುವ ವಾರ್ಡ್ ನಂ.17 ರ ಓಣಿಗಳು:                                                         
ನಿಯಂತ್ರಣಕ್ಕೆ ಪೊಲೀಸರ ದಿವ್ಯ ನಿರ್ಲಕ್ಷ್ಯ ಆರೋಪ.                      
ಜಯ ಧ್ವಜ ನ್ಯೂಸ್, ರಾಯಚೂರು,ಆ.5- ನಗರದ ವಾರ್ಡ್ ನಂ. 17 ರ ಓಣಿಗಳು ಪಡ್ಡೆ ಹುಡುಗರ ಅಡ್ಡೆಯಾಗಿ ಮಾರ್ಪಡುತ್ತಿದ್ದು ಮುಂದಿನ ದಿನಗಳಲ್ಲಿ ಅಪರಾಧಿಕ ಚಟುವಟಿಕೆಗಳ ತಾಣವಾದರೂ ಅಚ್ಚರಿ ಪಡಬೇಕಾಗಿಲ್ಲ. ವಾರ್ಡ್ ನಂ.17 ಗಾಜಗಾರಪೇಟೆಯ ಚೌಡಮ್ಮಕಟ್ಟೆ ದೇವಸ್ಥಾನ ಪಕ್ಕದ ಓಣಿಯಲ್ಲಿ ದಳವಾಯಿ ಮನೆ ಕಟ್ಟೆ ಮತ್ತು ಅದರ ಎದುರಿನ ಚಿಕ್ಕದಾದ ಓಣಿ  ಪಡ್ಡೆ ಹುಡುಗರು, ಅಪ್ರಾಪ್ತ ವಯಸ್ಕರಿಗೆ ಅಕ್ರಮ ಚಟುವಟಿಕೆ, ಮದ್ಯಪಾನ, ಚಟಗಳ ತಾಣವಾಗಿದೆ.  ಈ  ಪ್ರದೇಶದಲ್ಲಿ  ಸುಸಂಸ್ಕೃತ , ಸಂಭಾವಿತ ಜನಗಳೆ ವಾಸವಿರುವ ಇಲ್ಲಿ ಬೆಳಿಗ್ಗೆ, ಮಧ್ಯಾಹ್ನ  , ಸಂಜೆ ಮತ್ತು  ರಾತ್ರಿಯಾದರಂತೂ  ಹಾವಳಿ ಮಿತಿ ಮೀರುತ್ತದೆ, ಅಕ್ಕ ಪಕ್ಕದ ನಿವಾಸಿಗಳು ಬುದ್ಧಿವಾದ ಹೇಳಿದರೆ ಅದಕ್ಕೆ ಕಿಮ್ಮತ್ತು ನೀಡದೇ  ಆಟಾಟೋಪ ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ  ಯುವಕರು ಓಣಿಗಳಲ್ಲಿ ಗುಂಪುಗೂಡಿ ಮದ್ಯಪಾನ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಹಾಗೂ ಗದ್ದಲ ಸೃಷ್ಟಿಸುವುದರಿಂದ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳು ಆತಂಕದಲ್ಲಿ ಬದುಕುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.



ಸ್ಥಳೀಯರ ಹೇಳಿಕೆಯಂತೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಹಾಗೂ ಅಸಭ್ಯ ವರ್ತನೆ ತೋರಿಸುವುದರಿಂದ ಓಡಾಡಲು ಸಹ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಇಂತಹ ಚಟುವಟಿಕೆಗಳನ್ನು ತಡೆಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ  ಪೊಲೀಸ್ ಅಧಿಕಾರಿಗಳು ವಾರ್ಡ್ ನಂ.17ರಲ್ಲಿ ನಿಯಮಿತ ಗಸ್ತು ನಡೆಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತೀಚೆಗೆ ನಗರಕ್ಕಾಗಮಿಸಿದ  ಬಳ್ಳಾರಿ ವಲಯ ಐಜಿಪಿ ಡಾ. ಹರ್ಷಾರವರ ಪತ್ರಿಕಾಗೋಷ್ಟಿಯಲ್ಲೂ ನಗರದಲ್ಲಿ ಪಡ್ಡೆ ಹುಡುಗರ ಹಾವಳಿ  ಬಗ್ಗೆ ಪತ್ರಕರ್ತರು ಅವರ ಗಮನ ಸೆಳೆದಿದ್ದಾರೆ ಆದರೂ ಓಣಿಗಳಲ್ಲಿ ಪಡ್ಡೆ ಹುಡುಗರ ಹಾವಳಿ ನಿಯಂತ್ರಿಸಲು ಪೊಲೀಸರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಇನ್ನು ಮುಂದಾದರೂ ಸಾರ್ವಜನಿಕರ  ಆಸ್ತಿ ,ಮಾನ, ಪ್ರಾಣಗಳ ರಕ್ಷಣೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆನ್ನುವುದು ನಿವಾಸಿಗಳ ಆಗ್ರಹವಾಗಿದೆ.

Comments

Popular posts from this blog