ದೇವರಾಜ ಅರಸು ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ- ಉಪ ಆಯುಕ್ತ ಡಾ. ಶರಣಪ್ಪ
ಜಯ ಧ್ವಜ ನ್ಯೂಸ್ ,ರಾಯಚೂರು, ಆ, 20- ಡಿ.ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದರು ಎಂದು ರಾಯಚೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಡಾ. ಶರಣಪ್ಪ ಹೇಳಿದರು.
ಅವರಿಂದು ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಮಹಾನಗರ ಪಾಲಿಕೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ರವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರು ವಿಶೇಷವಾಗಿ ಹಿಂದುಳಿದ. ದೀನ. ದುರ್ಬಲ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಉಳ್ಳವರಾಗಿದ್ದರು. ಉಳುವವನೆ ಭೂಮಿಯ ಒಡೆಯ. ಭೂ ಸುಧಾರಣೆಯಂತಹ ಹಲವಾರು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಎಲ್ಲರಿಗೂ ಸಮಾನ ಭೂಮಿ ಹಂಚಿಕೆ ಹಾಗೂ ಅವರಿಗೆ ಸಮಾನ ಹಕ್ಕುಗಳನ್ನು ನೀಡಿದ್ದರು. ಭಾಷಾವಾರು ಪ್ರಾಂತ್ಯಗಳ ಮೇಲೆ ಮೊದಲು ಮೈಸೂರು ರಾಜ್ಯ ಉದಯವಾಯಿತು ಈ ಮೈಸೂರು ರಾಜ್ಯವನ್ನು ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.
ಜೇಗರಕಲ್ ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಮುಕ್ಕನಗೌಡ ಪೊಲೀಸ್ ಪಾಟೀಲ ಅವರು ಡಿ. ದೇವರಾಜ ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮ ನೀಡಿದ ಮಹತ್ವದ ನಾಯಕರಲ್ಲಿ ದೇವರಾಜ ಅರಸು ಅವರು ಪ್ರಮುಖರು. ಸಣ್ಣ ಸಮುದಾಯದಿಂದ ಬಂದರೂ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಹಿಂದುಳಿದವರು, ಅವಕಾಶ ವಂಚಿತರು ಹಾಗೂ ದುರ್ಬಲ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಆಶಯಕ್ಕೆ ಅನುಗುಣವಾಗಿ ಆಡಳಿತ ನಡೆಸಿದ ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ, ಮಲೆನಾಡಿನ ಮಾಣಿಕ್ಯ ಸೇರಿದಂತೆ ಹಲವು ಗೌರವಪೂರ್ಣ ಬಿರುದುಗಳಿಂದ ಕರೆಯಲಾಗುತ್ತಿತ್ತು. ಜನಪ್ರತಿನಿಧಿಯಾಗಿ ಮಾತ್ರವಲ್ಲದೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ನಾಯಕನಾಗಿ ಅವರು ಗುರುತಿಸಿಕೊಂಡಿದ್ದರು.
ರಾಜಕೀಯ ಪ್ರವೇಶದ ಆರಂಭಿಕ ಹಂತದಲ್ಲೇ ತಮ್ಮ ಗುರುಗಳ ಮಾರ್ಗದರ್ಶನವನ್ನು ಪಡೆದ ಅರಸು ಅವರು, ಉತ್ತಮ ಶಿಕ್ಷಣ ಮತ್ತು ಸಾಮಾಜಿಕ ಚಿಂತನೆಯ ಮಹತ್ವವನ್ನು ಅರಿತುಕೊಂಡಿದ್ದರು. ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಅವರ ರಾಜಕೀಯ ಬದುಕಿನ ಪ್ರಮುಖ ಆಶಯವಾಗಿತ್ತು.
ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಅವರಿಗೆ ಯಾವುದೇ ಪ್ರಬಲ ಜಾತಿ ಬಲ ಅಥವಾ ಆರ್ಥಿಕ ಬಲದ ಬೆಂಬಲವಿಲ್ಲದೆ ರಾಜ್ಯದ ಅತ್ಯುನ್ನತ ರಾಜಕೀಯ ಸ್ಥಾನಕ್ಕೇರಿದ ಅವರು, ಕರ್ನಾಟಕದ ರಾಜಕೀಯ ಚರಿತ್ರೆಯಲ್ಲೇ ಹೊಸ ಅಧ್ಯಾಯವನ್ನು ಆರಂಭಿಸಿದ್ದರು.
ಹಿಂದುಳಿದ ವರ್ಗಗಳು ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ವಿಧಾನಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರಕುವಂತೆ ಮಾಡಿದ್ದು ದೇವರಾಜ ಅರಸು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. 1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಅವರು, ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಅನೇಕ ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು.
ತಮ್ಮ ಮುಂದಿನ ಪೀಳಿಗೆಗೆ ಹಿಂದುಳಿದ ಹಾಗೂ ದುರ್ಬಲ ಸಮುದಾಯಗಳ ನಾಯಕರಿಗೆ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಮೂಲಕ ದೇವರಾಜ ಅರಸು ಅವರು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ಶಾಶ್ವತ ಬದಲಾವಣೆಗೆ ಕಾರಣರಾದರು. ಅವರ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಪರವಾದ ಚಿಂತನೆಗಳು ಇಂದಿಗೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿದಿವೆ ಎಂದು ಹೇಳಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆ. ಶಾಂತಪ್ಪ ಅವರು ಮಾತನಾಡಿ ಜಿಲ್ಲೆಯ 26 ಸಮುದಾಯಗಳ ಪ್ರತಿನಿಧಿಗಳು ಸೇರಿ ಡಿ. ದೇವರಾಜ ಅರಸು ಅವರ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಮಾಡಲಾಗುತ್ತಿರುವುದು ನೋಡಿ ಸಂತಸವಾಗುತ್ತಿದೆ. ಎಲ್ಲಾ ಸಮುದಾಯಗಳು ಹೀಗೆ ಒಕ್ಕೂಟ ಮಾಡಿಕೊಂಡು ಕಾರ್ಯಕ್ರಮಗಳು ಮಾಡುವುದರಿಂದ ನಮ್ಮ ಬೇಕು. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಾಯಕವಾಗಲಿದೆ ಡಿ. ದೇವರಾಜ ಅರಸು ಅವರ ಕನಸು ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು ಎಂಬುದಾಗಿತ್ತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಗುರುವಾರ ಬೆಳಿಗ್ಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೇರವಣಿಗೆ ಮಹಿಳಾ ಸಮಾಜದಿಂದ ಜಿಲ್ಲಾ ರಂಗ ಮಂದಿರದವರೆಗೆ ನಡೆಯಿತು. ಇದಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಸೇರಿದಂತೆ ಇತರೆ ಗಣ್ಯರಿಂದ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುನಿತಾ ಎಂ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಶ್ರೀಕಾಂತ ವಕೀಲ, ರವಿ ಬೋಸರಾಜು, ಹನುಮಂತ ಯಾದವ್, ಕಡಗೋಲು ಆಂಜನೇಯ, ಸೇರಿದಂತೆ ಇತರೆ ವಿವಿಧ ಸಮುದಾಯಗಳ ಮುಖಂಡರು ಹಿಂದುಳಿದ ವರ್ಗಗಳ ವಸತಿ ನಿಲಯ ವಿದ್ಯಾರ್ಥಿಗಳು. ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು. ಕುಮಾರಿ ಪ್ರಭಾ ನಾಡಗೀತೆ ಹಾಡಿದರು ಪತ್ರಾಂಕಿತ ಅಧಿಕಾರಿ ತಿಪ್ಪಾರೆಡ್ಡಿ ಸ್ವಾಗತಿಸಿದರು, ಡಾ, ದಂಡಪ್ಪ ಬಿರಾದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಬಯ್ಯ ವಂದಿಸಿದರು.






Comments
Post a Comment