ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಚಿವರ ಸಭೆ:

ರೈತರ ನೆರವಿಗೆ ಅಧಿಕಾರಿಗಳು ಧಾವಿಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು- ಸಚಿವ ಡಾ.ಅಜಯ್ ಧರ್ಮಸಿಂಗ್


ಜಯ ಧ್ವಜ ನ್ಯೂಸ್ ,ರಾಯಚೂರು ಅ.8-  ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಅಧಿಕಾರಿಗಳು ಧಾವಿಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಬರ  ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ಸರ್ಕಾರದ ನೂತನ ಸಚಿವರಾದಡಾ.ಅಜಯ್ ಧರಂ ಸಿಂಗ್ ಅವರು ಹೇಳಿದರು.


ಇಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸ ಅವರು ಮಾತನಾಡಿದರು.


ಮುಖ್ಯಮಂತ್ರಿಗಳು  ಹಾಗೂ ಉಪ‌ ಮುಖ್ಯಮಂತ್ರಿಗಳ ಸೂಚನೆಯಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಂಪುಟ ಸಭೆಯ ತೀರ್ಮಾನ ಮತ್ತು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸವಾಲಿನ ಸಮಯದಲ್ಲಿ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತುಕೊಳ್ಳದೆ ಕಡ್ಡಾಯವಾಗಿ ಫೀಲ್ಡ್ ಗೆ ಇಳಿದು ಕೆಲಸ ಮಾಡಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ನೋಟಿಸ್ ನೀಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿಶೇಷವಾಗಿ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರು ಕಷ್ಟದಲ್ಲಿದ್ದು, ಸರ್ಕಾರ ರೈತರ ಪರವಾಗಿದೆ. ಕೇವಲ ತಾಂತ್ರಿಕ ಕಾರಣಗಳನ್ನು  ನೆಪವಾಗಿ ಹೇಳದೆ, ಅಗತ್ಯ ಬಿದ್ದಲ್ಲಿ ಮ್ಯಾನುವಲ್ ಆಗಿ ಪರಿಶೀಲಿಸಿ ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದರು.


ಕುಡಿಯುವ ನೀರಿನ ಅಭಾವ ನೀಗಿಸಲು ರಾಜ್ಯ ಸರ್ಕಾರವು ಪ್ರತಿಯೊಂದು ತಾಲೂಕಿಗೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಅಗತ್ಯ ಆಕ್ಷನ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯಿಂದ 4 ಕೋಟಿ ರೂ. ಬಿಡುಗಡೆಯಾಗಿದೆ. ನಗರಾಡಳಿತ ವ್ಯಾಪ್ತಿಯಲ್ಲಿ ಇನ್ನು ಅಗತ್ಯವಿರುವ 8 ಕೋಟಿ ರೂ. ತುರ್ತು ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಮತ್ತು ನರೇಗಾ (ಉದ್ಯೋಗ ಖಾತ್ರಿ) ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಕೆಲಸ ಒದಗಿಸಬೇಕು. ರಾಜ್ಯದ ಜನರು ಉದ್ಯೋಗ ಅರಸಿ ನೆರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ರಸಗೊಬ್ಬರ ಮತ್ತು ಬೀಜಗಳ ದಾಸ್ತಾನು ಸಮರ್ಪಕವಾಗಿರಬೇಕು. ಕೆಲ ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ಕೃತಕ ಅಭಾವ ಸೃಷ್ಟಿಸಿ, ಅಧಿಕ ಬೆಲೆಗೆ, ನೆರೆ ರಾಜ್ಯಗಳಿಗೆ ಅಕ್ರಮವಾಗಿ ರಸಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ  ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸಾರ್ವಜನಿಕರ ಹಾಗೂ ರೈತರ ಹಿತ ಕಾಯುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ದಿನನಿತ್ಯದ ಸರಿಯಾಗಿ  ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜಿಲ್ಲೆಯ ರೈತರು ಕರ್ನಾಟಕ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಲು ಅಗತ್ಯ ಕ್ರಮವನ್ನು ಸಂಬಂಧಿಸಿದ ಅಧಿಕಾರಿಗಳು ವಹಿಸಬೇಕು.

ರಾಯಚೂರು ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಸರಿಯಾಗಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ನೀರಿನ ಕೊರತೆ ಕಂಡುಬಂದಲ್ಲಿ ಕೂಡಲೇ ಪರ್ಯಾಯ ವ್ಯವಸ್ಥೆ ಮೂಲಕ ಕುಡಿಯುವ ನೀರನ್ನು ಒದಗಿಸಬೇಕು. ಜಿಲ್ಲೆಯ ಪ್ರತಿಯೊಂದು ಹಳ್ಳಿಗಳ ಸಮಸ್ಯೆಗಳ ಪಟ್ಟಿ ಜಿಲ್ಲಾಡಳಿತಕ್ಕೆ ನೀಡಬೇಕು. ಜಿಲ್ಲಾಡಳಿತದಿಂದ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.

ಈ ವೇಳೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಅವರು ಮಾತನಾಡಿ, ತುಂಗಭದ್ರಾ ಜಲಾಶಯದಿಂದ ರಾಯಚೂರು ಜಿಲೆಯ ರಾಯಚೂರು, ಮಾನವಿ. ಸಿಂಧನೂರು. ಮಸ್ಕಿ ಹಾಗೂ ಸಿರವಾರ ತಾಲೂಕುಗಳಿಗೆ ಹಾಗೂ ಕೊಪ್ಪಳ ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ದಿನಾಂಕ: 31-03-2026 ರಿಂದ 15-04-2026 ರವರೆಗೆ ಪ್ರತಿ ದಿನ 1500 ಕ್ಯೂಸೆಕ್ಸ ರಂತೆ 2ಟಿ.ಎಂ.ಸಿ ನೀರನ್ನು ತುಂಗಭದ್ರಾ ಎಡದಂಡೆ ಕಾಲುವೆಯ ಮುಖಾಂತರ ಹರಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿ ದಿನ 300ಕ್ಯೂಸೆಕ್ಸ್ ರಂತೆ ಒಟ್ಟು 0.26 ಟಿ.ಎಂ.ಸಿ ನೀರನ್ನು ಬಲದಂಡೆ ಕಾಲುವೆಯ ಮುಖಾಂತರ ಹರಿಸಲಾಗುತ್ತದೆ. ಅಲ್ಲದೆ 2026-27ನೇ‌ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 119589 ರೈತರು ನೋಂದಣಿಯಾಗಿದ್ದಾರೆ. ರೈತರಲ್ಲಿ ಪರ್ಯಾಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ  2026ನೇ ಸಾಲಿನಲ್ಲಿ 3 ಜನ ಮಾನವ ಜೀವಹಾನಿಯಾಗಿದ್ದು, ತಲಾ 5 ಲಕ್ಷ ರೂ.ನಂತೆ ಒಟ್ಟು 15ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ  ಮಾಜಿ‌ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು,  ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ಮಾನವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾ ನಿರ್ದೇಶಕ ಡಾ.ಟಿ.ರೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶಿಲ್ದಾರರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.


Comments

Popular posts from this blog