ಕುಲಶಾಸ್ತ್ರೀಯ ಅಧ್ಯಯನದಂತೆ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಿಎಂಗೆ ಮನವಿ 


ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.14- 'ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು  ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡು 2018ರಿಂದ ಬಾಕಿಯಿರುವ ಕಡತಕ್ಕೆ ರಾಜ್ಯ ಸರ್ಕಾರದ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾಜ ರಾಜ್ಯಾದ್ಯಕ್ಷ ನಾಗರಾಜ ಗುರೂಜಿ ಅವರು ಮನವಿ ಸಲ್ಲಿಸಿದರು.

ಹೆಳವ ಸಮಾಜವು ಶತಮಾನಗಳಿಂದಲೂ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿತವನ್ನು ಅನುಭವಿಸುತ್ತ ಬಂದಿದೆ.ಈ ವಾಸ್ತವ ಸ್ಥಿತಿಯನ್ನು ಗುರುತಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿರುವ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ವತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಾನವಶಾಸ್ತ್ರ ವಿಭಾಗದ ಡಾ.ಎಲ್.ಶ್ರೀನಿವಾಸರವರು ಕರ್ನಾಟಕದ ಪಿಚ್ಚಿಗುಂಟ್ಲ, ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಗೆ 2018 ರಲ್ಲಿ ವರದಿ ಸಲ್ಲಿಸಿದ್ದಾರೆ.

2018 ರಿಂದಲೂ ಈ ಮಹತ್ವದ ಕಡತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಕಾಯುತ್ತಿದೆ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ. ಶತಮಾನಗಳಿಂದ ರಾಜ್ಯದ ಇತಿಹಾಸ ಮತ್ತು ವಂಶಾವಳಿಗಳನ್ನು ತನ್ನ ಭುಜದ ಮೇಲೆ ಹೊತ್ತು ಕಾಯುತ್ತಿರುವ ಸಮುದಾಯ ನಮ್ಮದು. ನಾವು ವಂಶಾವಳಿ ಹೇಳಿ ಒಕ್ಕಲು ಮನೆತನದವರು ಕೊಟ್ಟ ಅಲ್ಪ ಸ್ವಲ್ಪ ಕಾಣಿಕೆಯನ್ನು ಪಡೆದು ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ನಮ್ಮಿಂದ ತನ್ನ ವಂಶಾವಳಿ ಬರೆಯಿಸಿಕೊಳ್ಳುವ ಎಷ್ಟೋ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಉದಾಹರಣೆಗಳಿವೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಹಂತದಲ್ಲಿ ಸಮಾಲೋಚನೆಯಲ್ಲಿದೆ, ಹೆಳವ ಸಮಾಜವು ಜನಪದ,ಕಲೆ, ಸಂಸ್ಕೃತಿ ಮತ್ತು ಇತಿಹಾಸ ದಾಖಲೆಗಳನ್ನು ಉಳಿಸಿಕೊಂಡು ಬಂದಿದ್ದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾಜದ ಕಟ್ಟೆ ಕಡೆಯ ಹಂತದಲ್ಲಿದೆ. ಸರ್ಕಾರದಿಂದ ಸಿಗಬೇಕಾದ ಸಂವಿಧಾನಿಕ ಹಕ್ಕುಗಳು ಸಿಗದೆ ಇಂದಿಗೂ ಸಮಾಜದ ಮಕ್ಕಳು ಅಲೆಮಾರಿಗಳಂತೆಯೇ ಬದುಕುತ್ತಿದ್ದಾರೆ. ಸಾವಿರ ಲೆಕ್ಕದಲ್ಲಿರುವ ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಕುಲ ಶಾಸ್ತ್ರೀಯ ಅಧ್ಯಯನ ಕಡತಕ್ಕೆ ಜೀವ ಬರಲು ಕಡತವನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

ಕಳೆದ 8 ವರ್ಷಗಳಿಂದ ಕಡತವು ಒಂದೇ ಹಂತದಲ್ಲಿ ನಿಂತಿರುವುದು ಒಂದು ಸಮುದಾಯದ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ. ಬಡವರ ಮತ್ತು ಶೋಷಿತರ ಬಗ್ಗೆ ಇರುವ ಕಾಳಜಿ ಇದ್ದು, ಹೆಳವ ಸಮಾಜದ ನ್ಯಾಯಯುತ ಹೋರಾಟಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಇದ್ದರು.

Comments

Popular posts from this blog