ಗುರುಪೂರ್ಣಿಮೆ ಮಹೋತ್ಸವದಲ್ಲಿ ಶೈಕ್ಷಣಿಕ ಸೇವೆಗೆ ಚಾಲನೆ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಆರಂಭ- ಸಾಯಿ ಕಿರಣ ಆದೋನಿ
ಜಯ ಧ್ವಜ ನ್ಯೂಸ್ ,ರಾಯಚೂರು, ಜು.29- ಗುರುಪೂರ್ಣಿಮೆಯ ಅಂಗವಾಗಿ ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಬುಧವಾರ ಭಕ್ತಿಭಾವದಿಂದ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಶಿರಡಿ ಸಾಯಿಬಾಬಾರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಯೋಜನೆಗೂ ಚಾಲನೆ ನೀಡಲಾಯಿತು.
ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ಮಾತನಾಡಿ, ಗುರುಪೂರ್ಣಿಮೆಯು ಗುರು ಪರಂಪರೆಯನ್ನು ಸ್ಮರಿಸುವ ಪವಿತ್ರ ಹಬ್ಬವಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುವುದು ಸಾಯಿಬಾಬರ ಸಂದೇಶವಾಗಿದೆ ಎಂದು ಹೇಳಿದರು.
ಈ ಬಾರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಶಿರಡಿಯಿಂದ ತರಲಾಗಿರುವ ಶ್ರೀ ಸಾಯಿಬಾಬಾ ಧರಿಸಿದ್ದ ಪವಿತ್ರ ಕಾಫ್ನಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪವಿತ್ರ ವಸ್ತ್ರದ ಸಮ್ಮುಖದಲ್ಲೇ ಸಮಾಜಕ್ಕೆ ಉಪಯುಕ್ತವಾಗುವ ಶಾಶ್ವತ ಸೇವಾ ಕಾರ್ಯ ಆರಂಭಿಸುವ ಸಂಕಲ್ಪದೊಂದಿಗೆ ಶ್ರೀ ಶಿರಡಿ ಸಾಯಿಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್, ಅಮೆರಿಕದ ಸಾಫ್ಟ್‌ವೇರ್ ಇಂಜಿನಿಯರ್ ಅಭಿಲಾಷ್ ಚಕ್ಷಾ, ಸಂತೋಷ್ ಪಾಟೀಲ್ ಹಾಗೂ ಧರ್ಮರಾಜ್ ಗೌಡ ಅವರ ಸಹಯೋಗದಲ್ಲಿ ಶೈಕ್ಷಣಿಕ ನೆರವು ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ 25 ದಿನಗಳ ಕಾಲ ಅನ್ನಸಂತರ್ಪಣೆ ನಡೆಸಿರುವುದನ್ನು ಸ್ಮರಿಸಿದ ಅವರು, ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾಗಿದ್ದಾರೆ. ಮೊದಲ ಹಂತದಲ್ಲಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬ್ಲೆಟ್ ಸೇರಿದಂತೆ ಅಗತ್ಯ ಶೈಕ್ಷಣಿಕ ನೆರವು ನೀಡಲಾಗುವುದು ಎಂದರು.
ಈ ಯೋಜನೆಯಡಿ ಪಿಯುಸಿಯಲ್ಲಿ ಶೇ.90.33 ಅಂಕ ಗಳಿಸಿದ ಲಿಂಗಸುಗೂರು ತಾಲ್ಲೂಕಿನ ನರಸಿಂಹ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿ ಪ್ರಜ್ಞಾ ಅವರಿಗೆ ಲ್ಯಾಪ್‌ಟಾಪ್ ವಿತರಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಿದ ಬಳಿಕ ತಮಗೆ ದೊರೆತ ನೆರವನ್ನು ಸಮಾಜಕ್ಕೆ ಮರಳಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಫಲಾನುಭವಿಯೂ ಮುಂದೆ ಕನಿಷ್ಠ ಮೂವರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಂಕಲ್ಪ ಮಾಡಬೇಕು. ಹೀಗೆ ಸೇವೆಯ ಸರಪಳಿ ಮುಂದುವರಿದರೆ ಸಮಾಜದಲ್ಲಿ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂದು ಸಾಯಿ ಕಿರಣ ಆದೋನಿ ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ 6 ಗಂಟೆಯಿಂದ ಶ್ರೀ ಸಾಯಿಬಾಬಾರಿಗೆ ವಿಶೇಷ ಪೂಜೆ, ಅಭಿಷೇಕ, ಪುಷ್ಪಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ ಮಹಾ ಸಾಯಿ ಆರತಿ ನಡೆದ ಬಳಿಕ ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ಸಂಗೀತೋತ್ಸವ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಧ್ಯಾತ್ಮಿಕ ಪ್ರವಚನಗಳು ಮಹೋತ್ಸವಕ್ಕೆ ವಿಶೇಷ ಮೆರುಗು ತಂದವು. ಎರಡು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿದ್ದಾರೆ.


Comments
Post a Comment