ಯುವಜನತೆಯಲ್ಲಿ ಹಸಿರು ಇಂಧನದ ಜಾಗೃತಿಗಾಗಿ ಮನೆಯಲ್ಲೇ ಸೋಲರ್ ಚಾಲಿತ ಕಿರು ಚಲನಚಿತ್ರ ಮಂದಿರ ನಿರ್ಮಿಸಿದ ಅಧ್ಯಾಪಕ

ಜಯ ಧ್ವಜ ನ್ಯೂಸ್ , ರಾಯಚೂರು, ಜು.26- ಯುವಜನತೆಯಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಸೋಲಾರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅಧ್ಯಾಪಕರೂ ಆದ ಪಟ್ಟಣದ ನಿವಾಸಿ ವಿಜಯ್ ಸರೋದೆ ಅವರು ಸೋಲಾರ್ ಚಾಲಿತ ಗೃಹ ಬಳಕೆಯ ಚಲನಚಿತ್ರ ಮಂದಿರವೊಂದನ್ನು (ಸೋಲಾರ್ ಪವರ್ಡ್ ಹೋಮ್ ಥಿಯೇಟರ್ ಸಿಸ್ಟಮ್) ನಿರ್ಮಿಸಿದ್ದಾರೆ. ಇತ್ತೀಚಿಗೆ ಮನೆಯಲ್ಲಿಯೇ ಸಿನೆಮಾ ಥಿಯೇಟರ್ ನಿರ್ಮಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದಕ್ಕಾಗಿ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಅದೇ ಒಂದು ದುಬಾರಿ ಮೊಬೈಲ್ ಖರೀದಿಸುವ ಹಣದಲ್ಲಿ ಇಡೀ ಕುಟುಂಬದವರು ಕುಳಿತುಕೊಂಡು ಮನರಂಜನೆ ಪಡೆಯುವ ರೀತಿಯಲ್ಲಿ ಹಸಿರು ಇಂಧನವಾದ ಸೋಲಾರ್ ಚಾಲಿತ ಗೃಹ ಚಲನಚಿತ್ರ ಮಂದಿರವನ್ನು ನಿರ್ಮಿಸಲು ಸಾಧ್ಯವಿದೆ‌ ಎಂದು ಅವರು ತಿಳಿಸುತ್ತಾರೆ.

ಗ್ರೀನ್ ರಾಯಚೂರು ಸಂಸ್ಥೆಯ ಮಾಧ್ಯಮ ಸಲಹೆಗಾರರು ಹಾಗೂ ಸ್ವಯಂಸೇವಕ‌ರಾಗಿರುವ ವಿಜಯ್ ಸರೋದೆ ಅವರು ಕಳೆದ ಐದು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ತಮ್ಮ ಮನೆಯನ್ನು ಸೋಲಾರ್ ವಿದ್ಯುತ್ ಮೇಲೆ ನಡೆಯುವಂತೆ ಪರಿವರ್ತನೆ ಮಾಡಿಕೊಂಡಿದ್ದು, ಬಿಸಿನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವ ಜೊತೆಗೆ ಸೋಲಾರ್ ವಿದ್ಯುತ್ ಮೂಲಕವೇ ಚಾರ್ಜ್ ಆಗುವ ಎಲೆಕ್ಟ್ರಿಕ್ ವಾಹನ ಬಳಸುವ ಮೂಲಕ ತಮ್ಮ ಮನೆಯನ್ನು ಸಂಪೂರ್ಣವಾಗಿ 'ಹಸಿರು ಇಂಧನ ಗೃಹ'ವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದೀಗ ಇದೇ ಸೋಲರ್ ಬಗ್ಗೆ ಯುವಜನತೆಯ ಗಮನ ಸೆಳೆಯುವ ಉದ್ದೇಶದಿಂದ ಪ್ರಯೋಗ ರೀತಿಯಲ್ಲಿ, ಅತ್ಯಾಧುನಿಕ ಡಾಲ್ಬಿ ಆಟ್ಮಾಸ್ ಸರೌಂಡ್ ಸೌಂಡ್, ಹೆಚ್.ಡಿ.ಆರ್ 4-ಕೆ ರೆಸ್ಯೂಲ್ಯೂಶನ್ ಪ್ರಾಜೆಕ್ಟರ್ (ಯೂಟ್ಯೋಬ್ ಹಾಗೂ ಒಟಿಟಿ ಸಪೋರ್ಟ್'ನೊಂದಿಗೆ) ಹಾಗೂ‌ ಪರದೆ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸುವ ಗೃಹ ಚಿತ್ರಮಂದಿರವನ್ನು ನಿರ್ಮಿಸಿರುವ ಸರೋದೆ ಅವರು, ಸಿನೆಮಾ ಹಾಗೂ ಒಟಿಟಿ ವೀಕ್ಷಣೆ ಯುವಜನತೆಯ ಆಸಕ್ತಿ ವಿಷಯವಾದ್ದರಿಂದ ಅವರ ಗಮನ ಸೆಳೆದು ಉಳಿತಾಯ, ರಚನಾತ್ಮಕತೆ ಹಾಗೂ ಹಸಿರು ಇಂಧನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ನೂತನ ಪ್ರಯೋಗ ಮಾಡಿರುವುದಾಗಿ ತಿಳಿಸುತ್ತಾರೆ. 

ಈ ಬಗ್ಗೆ ವಿವರಣೆ ನೀಡಿರುವ ವಿಜಯ್ ಸರೋದೆ ಅವರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮೊದಲಿನಿಂದಲೂ ಬಿಸಿಲಿಗೆ ಹೆಸರುವಾಸಿ. ನಮಗೆಲ್ಲಾ ಸೋಲರ್ ಉಚಿತ ಸಂಪನ್ಮೂಲವಿದ್ದಂತೆ. ಲಕ್ಷ-ಕೋಟಿಗಳನ್ನು ಖರ್ಚು ಮಾಡಿ ಮನೆಗಳನ್ನು ನಿರ್ಮಿಸುವ ಜನ, ಸೋಲಾರ್ ಪ್ಯಾನಲ್ ಹಾಗೂ ಸೋಲಾರ್ ವಾಟರ್ ಹೀಡರ್'ಗಳನ್ನು ಅಳವಡಿಸುವುದನ್ನು ಮರೆಯುತ್ತಾರೆ‌ ಅಥವಾ ಅದರ ಬಗ್ಗೆ ಆಸಕ್ತಿಯನ್ನೇ ತೋರಿಸುವುದಿಲ್ಲ. ಈ ಬಗ್ಗೆ ಅರಿವು ಮತ್ತು ಜಾಗೃತಿಯ ಕೊರತೆ ಇದಕ್ಕೆ ಕಾರಣ ಆಗಿರಬಹುದು ಅಥವಾ ಸೋಲಾರ್ ದುಬಾರಿ, ನಿರ್ವಹಣೆ ಕಷ್ಟ ಎಂಬ ತಪ್ಪು ಗ್ರಹಿಕೆ ಕೂಡ ಕಾರಣ ಆಗಿರಬಹುದು. ವಾಸ್ತವದಲ್ಲಿ ಈ ರೀತಿ ಗೃಹ ಬಳಕೆ ಸೋಲಾರ್ ಪರಿಕರಗಳನ್ನು ಅಳವಡಿಸುವುದು ಏಕ ಬಾರಿಯ ಹೂಡಿಕೆಯಾಗಿದ್ದು, ಅದರಿಂದ ನಮಗೆ ಮಾಸಿಕವಾಗಿ ಸಾವಿರಾರು ರೂಪಾಯಿಗಳ ಲಾಭ‌ ಸಿಗುತ್ತೆ ಅಥವಾ ಆಗುವ ವೆಚ್ಚಗಳಲ್ಲಿ ಕಡಿತವಾಗಿ ಉಳಿತಾಯವಾಗುತ್ತೆ.  ಸೋಲಾರ್ ಪ್ಯಾನಲ್'ಗಳನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್ಲಿನಲ್ಲಿ ಉಳಿತಾಯವಾಗುತ್ತೆ, ಹಾಗೇ ಸೋಲಾರ್ ವಾಟರ್ ಅಳವಡಿಸುವುದರಿಂದ ಸಾವಿರಾರು ರೂಪಾಯಿಗಳ ವಿದ್ಯುತ್ ಗೀಸರ್ ಬಿಲ್, ಗ್ಯಾಸ್ ಗೀಸರ್ ಅಥವಾ ಹೊಗೆಯುಗುಳುವ ಕಟ್ಟಿಗಳ ಮೇಲಿನ ವೆಚ್ಚ ತಪ್ಪುತ್ತೆ. ಸೋಲಾರ್ ಪರಿಕರಗಳನ್ನು ಒಮ್ಮೆ ಅಳವಡಿಸುವುದರಿಂದ ಕನಿಷ್ಟ 5 ವರ್ಷಗಳಿಂದ ಗರಿಷ್ಟ 25 ವರ್ಷಗಳ ವರೆಗೆ ಅದರ ಉಪಯೋಗ ಪಡೆಯಬಹುದು (ಹೆಚ್ಚಿನ ನಿರ್ವಹಣೆಯ ಜಂಜಾಟವಿಲ್ಲದಿದ್ದರೂ, ಧೂಳು ಹಾಗೂ ಸಂಭಾವ್ಯ ಬಾಹ್ಯ ಹಾನಿಗಳನ್ನು ತಪ್ಪಿಸುವುದರಿಂದ ಅವುಗಳ ಬಾಳಿಕೆ ಪ್ರಮಾಣ ಹೆಚ್ಚುತ್ತೆ) ಹಾಗೇ ಮಾಸಿಕ ಉಳಿತಾಯಗಳಿಂದಾಗಿ ನಾವು ಕನಿಷ್ಟ ಒಂದರಿಂದ ಗರಿಷ್ಟ ಮೂರು ವರ್ಷಗಳಲ್ಲಿ ಹೂಡಿಕೆಯ ಸಂಪೂರ್ಣ ರಿಟರ್ನ್ ಕೂಡ ಪಡೆಯವಹುದು. ಈಗೀಗ ಕೇಂದ್ರದ ಸಬ್ಸಿಡಿ ಕೂಡ ಸಿಗುತ್ತಿರುವುದರಿಂದ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳು ಇನ್ನೂ ಅಗ್ಗ ಹಾಗೂ ಸರಳ ಕೂಡ ಆಗಿದೆ ಎಂದು ತಿಳಿಸುತ್ತಾರೆ (ಗೃಹ ಬಳಕೆ ಸೋಲಾರ್ ಹಾಗೂ ಗೃಹ ಚಿತ್ರಮಂದಿರಕ್ಕೆ ಸಂಬಂಧಿಸಿದಂತೆ ಏನೇ ಮಾಹಿತಿ ಬೇಕಿದ್ದರೂ ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ - 9449432018) ಎಂದು ಅವರು ತಿಳಿಸಿದ್ದಾರೆ 




Comments

Popular posts from this blog