ಜಿಲ್ಲಾಡಳಿತದಿಂದ 19ನೇ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ:    ಪ್ರಜಾಪ್ರಭುತ್ವದ ನೈಜ ಶಕ್ತಿ ಭಾರತೀಯ ಪ್ರಜೆಗಳಲ್ಲಿದೆ- ಜಿಲ್ಲಾಧಿಕಾರಿ ಪೂವಿತಾ ಎಸ್.


ಜಯ ಧ್ವಜ ನ್ಯೂಸ್  ,ರಾಯಚೂರು ಸೆ.15-  ಪ್ರಜಾಪ್ರಭುತ್ವದ ನೈಜ ಶಕ್ತಿ ಕೇವಲ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳ ಕೈಯಲ್ಲಿರದೆ, ದೇಶದ ಪ್ರತಿಯೊಬ್ಬ ಭಾರತೀಯ ಪ್ರಜೆಗಳಲ್ಲಿದೆ ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. 

ಅವರಿಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಮತ್ತು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು, ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತವು 1947ರ ಆಗಸ್ಟ್ 15ರಂದು ಸ್ವತಂತ್ರಗೊಂಡರೆ, 1950ರ ಜನವರಿ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಅನೇಕ ಮಹನೀಯರ ದೀರ್ಘಾವಧಿಯ ದೂರದೃಷ್ಟಿಯ ಫಲವಾಗಿ ನಮಗೆ ಈ ಶ್ರೇಷ್ಠ ಸಂವಿಧಾನ ದೊರೆತಿದೆ. ಸಂವಿಧಾನ ಜಾರಿಗೆ ಬಂದು 70ಕ್ಕೂ ಹೆಚ್ಚು ವರ್ಷಗಳು ಕಳೆದರೂ, ಅದು ಇಂದಿನ ನಾಗರಿಕರ ಅಗತ್ಯತೆಗಳಿಗೆ ಅತ್ಯಂತ ಸೂಕ್ತವಾಗಿದೆ ಎಂದರು.


ಸರಕಾರದ ಆಡಳಿತವು ಪಾರದರ್ಶಕತೆ, ನ್ಯಾಯಬದ್ಧತೆ ಮತ್ತು ನಾಗರಿಕರ ಘನತೆಯನ್ನು ಎತ್ತಿಹಿಡಿಯುವಂತಿರಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಸೇರಿದಂತೆ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸಿದ್ದು, ಬದಲಾಗುವ ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ತರಲು ಅವಕಾಶ ಕಲ್ಪಿಸಿರುವ ಸುಧಾರಣಾವಾದಿ ವ್ಯವಸ್ಥೆ ನಮ್ಮದಾಗಿದೆ ಎಂದರು.

ದೇಶದ ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳು ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ಅರ್ಥೈಸಿಕೊಂಡು, ಈ ಸಂದೇಶವನ್ನು ತಮ್ಮ ಮನೆ-ಮನಗಳಿಗೆ ತಲುಪಿಸುವ ರಾಯಭಾರಿಗಳಾಗಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿದು ದೇಶದ ಪ್ರಗತಿಗೆ ತಾವೆಲ್ಲರೂ ಶ್ರಮಿಸಬೇಕು ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಕೊಡುಗೆ ನಮ್ಮ ಸಂವಿಧಾನ. ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದಂತೆ, ಸಮಾಜ ಮತ್ತು ಪರಿಸರದ ಕಡೆಗೆ ಕೆಲವು ಮೂಲಭೂತ ಕರ್ತವ್ಯಗಳನ್ನು ಸಹ ನಿಗದಿಪಡಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಸ್ವಚ್ಛತೆ ಮತ್ತು ಉತ್ತಮ ಆಡಳಿತವನ್ನು ಕಾಯ್ದುಕೊಳ್ಳುವುದು ಕೇವಲ ಅಧಿಕಾರಿಗಳ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ನಾಗರಿಕ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದರು.

ಇತ್ತೀಚೆಗೆ ಜಿಲ್ಲೆಯ ಕೆಲವು ಶಾಲೆಗಳು, ವಸತಿ ನಿಲಯಗಳು ಮತ್ತು ಆಂಗನವಾಡಿಗಳಲ್ಲಿ ಆಹಾರ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಂಡುಬಂದಿದ್ದು, ಇವುಗಳನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ಮಲ ನಿಲಯ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಶಾಲೆ, ಹಾಸ್ಟೆಲ್ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಕೈಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಬಯಲು ಮುಕ್ತ ಗ್ರಾಮ ಹಾಗೂ ಬಯಲು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರ ಸಹಕಾರದೊಂದಿಗೆ ನಿರಂತರ ಶ್ರಮಿಸಲಾಗುವುದು. ಸಾರ್ವಜನಿಕರು ನೀಡುವ ಪ್ರತಿಯೊಂದು ಅರ್ಜಿಯೂ ಕೇವಲ ಕಾಗದದ ತುಂಡಲ್ಲ. ಅದರ ಹಿಂದೆ ಒಂದು ಕುಟುಂಬ, ಊರು ಹಾಗೂ ಅವರ ಕನಸುಗಳಿರುತ್ತವೆ. ಆದ್ದರಿಂದ ಅಧಿಕಾರಿಗಳು ಪ್ರತಿಯೊಂದು ಮನವಿಯನ್ನೂ ಗಂಭೀರವಾಗಿ ಪರಿಗಣಿಸಿ ಜನಪರ ಆಡಳಿತ ನೀಡಬೇಕು ಎಂದರು.

ಈ ವೇಳೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಐದು ವರ್ಷಕ್ಕೊಮ್ಮೆ ಮತದಾನ ಮಾಡುವುದು ಮಾತ್ರವೇ ಪ್ರಜಾಪ್ರಭುತ್ವವಲ್ಲ, ಪ್ರಜೆಗಳೇ ಪ್ರಭುಗಳಾಗಿ ಭಾಗವಹಿಸುವುದೇ ಪ್ರಜಾಪ್ರಭುತ್ವದ ನೈಜ ಬೇರು ಆಗಿದೆ. ಜಗತ್ತಿನ ಪ್ರಥಮ ಆಧ್ಯಾತ್ಮಿಕ ಹಾಗೂ ಪ್ರಜಾಸತ್ತಾತ್ಮಕ ಸಂಸತ್ತು ಎಂದರೆ ಅದು ಬಸವಕಲ್ಯಾಣ ಕರ್ನಾಟಕದ ನೆಲದಲ್ಲಿ ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದರು.

ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಆಡಳಿತಾತ್ಮಕ ಸ್ವಾತಂತ್ರ‍್ಯ ನೀಡುವುದರಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಸಿಗದಿದ್ದ ಹಕ್ಕುಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮಗೆ ತಂದುಕೊಟ್ಟಿದೆ. ಇದರಿಂದಾಗಿ ಬಡವರ ಮಕ್ಕಳು ಕೂಡ ಇವತ್ತು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಮತ್ತು ರಾಜಕೀಯ ನಾಯಕರಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.

ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಅಧಿಕಾರಿ, ಸೈನಿಕ ಅಥವಾ ನಾಯಕರಾಗುವ ಮುನ್ನ ಪ್ರತಿಯೊಬ್ಬರೂ ಮೊದಲು ಉತ್ತಮ ಮಾನವೀಯ ಮೌಲ್ಯವುಳ್ಳ ಪ್ರಜೆಯಾಗುವುದು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶಾಂತ್ರಿ ಕುಲಪತಿಗಳಾದ ಜೆ.ಎಸ್.ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ: ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ರತ್ನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿವಿಧ ಗಣ್ಯರಿಂದ ಮಾಲಾರ್ಪಣೆ ಮಾಡಿ, ಗೌರವಿಸಲಾಯಿತು. ನಂತರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಜಿ. ಅವರಿಂದ ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ಪೋಸ್ಟರ್ ಬಿಡುಗಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಣ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ನಿರ್ವಹಿಸಲಾಗುತ್ತಿರುವ ವಸತಿ ನಿಲಯ, ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ನಿರ್ಮಲ ನಿಲಯ ಅಭಿಯಾನದ ಪೋಸ್ಟರ್ ಹಾಗೂ ಯುವ ಸಂಸತ್ತು ಪೋಸ್ಟರ್‌ಗಳನ್ನು ವಿವಿಧ ಗಣ್ಯರಿಂದ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎನ್.ಶಿವಶಂಕರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ರಾಯಚೂರು ತಹಶಿಲ್ದಾರ್ ಸುರೇಶ ವರ್ಮಾ, ಡಯಟ್ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್, ಪರಿಶಿಷ್ಟ ಪಂಗಡಗಳ ಇಲಾಖೆಯ ಅಧಿಕಾರಿ ಶಿವಮಾನಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.

ಪರಶುರಾಮ ಅರೋಲಿಕರ್ ಮತ್ತು ಸಂಗಡಿಗರಿಂದ ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ನಡೆಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಅವರು ಸ್ವಾಗತಿಸಿದರು.

ಅಸ್ಕಿಹಾಳ ಪ್ರೌಢ ಶಾಲೆಯ ಶಿಕ್ಷಕಿ ಯಶೋಧ ಹಾಗೂ ದಂಡಪ್ಪ ಬಿರಾದಾರ್ ಅವರು ನಿರೂಪಿಸಿದರು. ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು ವಂದಿಸಿದರು.


 

Comments

Popular posts from this blog