ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಅಳವಡಿಸಿಕೊಳ್ಳಿ- ತಹಶೀಲ್ದಾರ್ ಸುರೇಶ ವರ್ಮಾ

ಜಯ ಧ್ವಜ ನ್ಯೂಸ್ ,ರಾಯಚೂರು ಸೆ. 02 - ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ, ಸಿದ್ಧಾಂತ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಮಕ್ಕಳಲ್ಲಿಯೂ ಬೆಳೆಸಬೇಕು ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು ಹೇಳಿದರು.

 ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.


ನಾರಾಯಣ ಗುರು ಜಯಂತಿಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಮೆರವಣಿಗೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದೆಂದರು. ಜಯಂತಿ ಆಚರಣೆಯು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ನಾರಾಯಣ ಗುರುಗಳ ವಿಚಾರಧಾರೆ ಹಾಗೂ ಆದರ್ಶಗಳನ್ನು ಮನೆ, ಮನಗಳಲ್ಲಿ ಅನುಸರಿಸುವ ಮೂಲಕ ಮಕ್ಕಳಿಗೂ ಪರಿಚಯಿಸಬೇಕು ಎಂದರು.

ನಾರಾಯಣ ಗುರುಗಳು ಕೇವಲ ಒಬ್ಬ ವ್ಯಕ್ತಿಯಲ್ಲ, ಭಾರತದ ಮಣ್ಣಿನಲ್ಲಿ ಹುಟ್ಟಿದ ಶಕ್ತಿಯಾಗಿದ್ದರು. ಅಂಧಶ್ರದ್ಧೆ, ಮೌಢ್ಯ, ಮೇಲು-ಕೀಳು ಎಂಬ ಭೇದಭಾವ ಹಾಗೂ ಅಸ್ಪೃಶ್ಯತೆ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಸಮಾಜಕ್ಕೆ ಅವರು ಬೆಳಕಾಗಿ ಬಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಆಗಿದ್ದಾರೆ ಎಂದು ಹೇಳಿದರು.

ಆ ಕಾಲದಲ್ಲಿ ಕೆಳಜಾತಿಯವರಿಗೆ ದೇವಾಲಯ ಪ್ರವೇಶ ಸೇರಿದಂತೆ ಹಲವು ಸಾಮಾಜಿಕ ಅವಕಾಶಗಳು ನಿರಾಕರಿಸಲ್ಪಟ್ಟಿದ್ದವು. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಇಂತಹ ಅಸಮಾನತೆ ಮತ್ತು ದಮನದ ವ್ಯವಸ್ಥೆಯ ವಿರುದ್ಧ ನಾರಾಯಣ ಗುರುಗಳು ಹೋರಾಡಿ, ಶಿಕ್ಷಣ, ಜಾಗೃತಿ ಹಾಗೂ ಒಗ್ಗಟ್ಟಿನ ಮಹತ್ವವನ್ನು ಸಾರಿದರು ಎಂದರು.

ಒಂದೇ ದೇವರು, ಒಂದೇ ಧರ್ಮ, ಒಂದೇ ಜಾತಿ ಎಂಬ ಸಮಾನತೆಯ ಸಂದೇಶದ ಮೂಲಕ ಸಮಾಜದಲ್ಲಿ ಮಾನವೀಯತೆ ಮತ್ತು ಸಹೋದರತ್ವದ ಭಾವನೆ ಮೂಡಿಸಿದವರು ನಾರಾಯಣ ಗುರುಗಳು. ಅವರು ತಮ್ಮ ಜೀವನದಲ್ಲಿಯೇ ಈ ತತ್ವಗಳನ್ನು ಅನುಸರಿಸಿ ಸಮಾಜಕ್ಕೆ ಮಾದರಿಯಾದರು ಎಂದರು.

ಅಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ನಾರಾಯಣ ಗುರುಗಳು ಧೈರ್ಯದಿಂದ ಅಸಮಾನತೆ ಹಾಗೂ ಮೌಢ್ಯದ ವಿರುದ್ಧ ಹೋರಾಡಿ, ಸಮಾಜ ಸುಧಾರಣೆಗೆ ಮಾರ್ಗದರ್ಶಕರಾದರು. ಅವರ ಪಾಂಡಿತ್ಯ, ಅಧ್ಯಯನ ಹಾಗೂ ವಿವಿಧ ಧರ್ಮಗಳ ವಿಚಾರಗಳ ಮೇಲಿನ ಜ್ಞಾನವು ಅವರ ಚಿಂತನೆಗೆ ಮತ್ತಷ್ಟು ಬಲ ನೀಡಿತ್ತು ಎಂದು ಹೇಳಿದರು.

ಉಪನ್ಯಾಸಕರಾಗಿ ಗಂಗಾವತಿ ವಕೀಲರಾದ ನಾಗರಾಜ ಎಸ್. ಅವರು ಮಾತನಾಡಿ, ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುವುದರ ನಿಜವಾದ ಉದ್ದೇಶ ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ. ಸಮಾನತೆ, ಶಿಕ್ಷಣ, ಮಾನವೀಯತೆ ಹಾಗೂ ಸಹೋದರತ್ವದ ಸಂದೇಶವನ್ನು ಸಮಾಜದಲ್ಲಿ ಬಲಪಡಿಸುವ ಮೂಲಕ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಮುರುಳಿಧರ ರಾವ್, ಪಾಲಿಕೆಯ ವ್ಯವಸ್ಥಾಪಕ ರಾಜು, ಮುಖಂಡರಾದ ಕೆ.ಶಾಂತಪ್ಪ,  ಚನ್ನಣ್ಣ ಗೌಡ, ಜಿ.ಶಿವಮೂರ್ತಿ, ತಿಮ್ಮಪ್ಪ ನಾಡಗೌಡ, ಮಂಜುನಾಥ ಹಾನಗಲ್, ಸಮಾಜದ ಮುಖಂಡರಾದ ಎಂ.ನರಸನಗೌಡ, ನಾರಾಯಣ ರಾವ್, ರಾಮಕೃಷ್ಣ, ರಾಚನಗೌಡ, ಅಶೋಕ ಚಾಗಬಾವಿ, ಅನಂತರಾಜು, ಪರಶುರಾಮ ಗೌಡ, ಈರಪ್ಪಗೌಡ, ತಾಯಣ್ಣ ಗೌಡ, ಹನುಮಂತಗೌಡ, ರಂಗನಾಥ, ಶ್ರೀನಿವಾಸಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಮೆರವಣಿಗೆಗೆ ಚಾಲನೆ:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಿನ್ನೆಲೆಯಲ್ಲಿ ನಗರದ ಮಹಿಳಾ ಸಮಾಜದ ಮುಂಭಾಗದ ಆರ್ಯ ಈಡಿಗ ಸಮಾಜದ ಕಾರ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ವಿವಿಧ ಗಣ್ಯರಿಂದ ಪೂಜಾ ಸಲ್ಲಿಸಿ, ಮೆರವಣಿಗೆ ಚಾಲನೆ ನೀಡಿದರು.

ಮೆರವಣಿಗೆಯು ರಾಯಚೂರು ಮಹಾನಗರ ಪಾಲಿಕೆ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ರಂಗಮಂದಿರಕ್ಕೆ ಬಂದು ಸೇರಿತು.

 ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಿದ್ದರು.  ಈ ಸಂದರ್ಭದಲ್ಲಿ ತಹಶಿಲ್ದಾರ್ ಸುರೇಶ ವರ್ಮಾ, ಮುಖಂಡರಾದ ಕೆ.ಶಾಂತಪ್ಪ, ಜಿಂದಪ್ಪ, ನರಸಿಂಹಲು ಮಾಡಗಿರಿ, ರವಿ ಪಾಟೀಲ್ ಸೇರಿದಂತೆ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.

Comments

Popular posts from this blog