ಮಾನ್ವಿಯಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಕ್ಕೆ ‌ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ:          ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ, ತ್ವರಿತವಾಗಿ ಪರಿಹಾರ- ಸಚಿವ ಡಾ.ಅಜಯ್ ಧರ್ಮಸಿಂಗ್


ಜಯ ಧ್ವಜ ನ್ಯೂಸ್ ,ರಾಯಚೂರು ಸೆ.5-  ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವೆ ಆಂದೋಲನದ ಕಾರ್ಯಕ್ರಮವು ಕೇವಲ ರಾಜಧಾನಿ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ಪ್ರತಿಯೊಂದು ಜಿಲ್ಲಾ ಹಾಗೂ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವುದಾಗಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಜನಪರ ಕಾರ್ಯಕ್ರಮಕ್ಕೆ ಚಾಲನೆ ಇಂದು ನೀಡಲಾಗಿದೆ  ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು.


ಜಿಲ್ಲೆಯ ಮಾನ್ವಿ ಪಟ್ಣಣದ ಭಾಷುಮಿಯ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ರಾಯಚೂರು ಇವರ ವತಿಯಿಂದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ -2026ರ ಕಾರ್ಯಕ್ರಮಕ್ಕೆ ಚಾಲನೆ ‌ನೀಡಿ ಅವರು ಮಾತನಾಡಿದರು. 

ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಬಾಗಿಲಿಗೆ ತೆರಳಿ ಅವರ ಕಷ್ಟ-ಸುಖಗಳಲ್ಲಿ ಭಾಗಿದಾರರಾಗಬೇಕು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದು ಸರ್ಕಾರದ ಮುಖ್ಯ ಗುರಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿರುವಿಕೆಯ ಹಣೆಪಟ್ಟಿಯನ್ನು ಕಳಚಲು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನಾಗಿ ಘೋಷಿಸಲಾಗಿದ್ದು, ಈ ನಿಟ್ಟಿನಲ್ಲಿ ಮಾನವಿ ತಾಲೂಕಿನಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.


ಈ ಪ್ರಜಾಸೇವಾ  ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲದೆ, ಪ್ರತಿ ಶನಿವಾರವೂ ನಿರಂತರವಾಗಿ ಜರುಗಲಿದೆ. ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದ ಶಾಸಕರು ಮತ್ತು ಸಂಬಂಧಿತ ಅಧಿಕಾರಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು  ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ವಾರದ ಶನಿವಾರಗಳಂದು ನಿರ್ದಿಷ್ಟ ತಾಲೂಕುಗಳಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದೆನೆ. ಉಳಿದ ಶನಿವಾರಗಳಲ್ಲಿ ಸ್ಥಳೀಯ ಶಾಸಕರು ಹಾಗೂ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಈ ಕಾರ್ಯಕ್ರಮ  ಮುನ್ನಡೆಸಲಿದ್ದಾರೆ. ಕೇವಲ ಮಾನವಿ ಅಷ್ಟೇ ಅಲ್ಲದೆ, ಒಟ್ಟಾರೆ ಕರ್ನಾಟಕ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಈ ಜನಪರ ಆಡಳಿತ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ಜಾರಿಯಲ್ಲಿದೆ ಎಂದರು.


*ಜನಪರ ಯೋಜನೆಗಳು:* ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ನೆರವು ನೀಡಲಾಗುತ್ತಿದೆ. ಪಿಂಚಣಿ ಹಾಗೂ ಪಡಿತರ ಚೀಟಿಗಳ ವಿತರಣೆಯೂ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

*ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಒತ್ತು:* ರಾಜ್ಯದಲ್ಲಿ ಭೀಕರ ಬರಗಾಲವಿದ್ದ ಸಂದರ್ಭದಲ್ಲಿಯೂ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ರಾಯಚೂರು ಜಿಲ್ಲೆಯ ಐದು ತಾಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಣೆಯಾಗಿದ್ದು, ಉಳಿದ 3 ತಾಲೂಕುಗಳನ್ನೂ ಸಹ ಬರಪೀಡಿತವೆಂದು ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

*18 ಸಾವಿರ ಕೋಟಿ ರೂಪಾಯಿ ಅನುದಾನ ಹಂಚಿಕೆ:* ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಹಲವು ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 18,000 ಕೋಟಿ ರೂಪಾಯಿಗಳ ಅನುದಾನವನ್ನು ನಮ್ಮ ಭಾಗಕ್ಕೆ ಹಂಚಿಕೆ ಮಾಡಲಾಗಿದ್ದು, 2023-24ರಲ್ಲಿ 3 ಕೋಟಿ, 2024-25ರಲ್ಲಿ 5 ಕೋಟಿ, 2025-26ರಲ್ಲಿ 5 ಕೋಟಿ ಹಾಗೂ ಪ್ರಸ್ತುತ ಸಾಲಿನಲ್ಲಿ 5 ಕೋಟಿ ರೂ.ಗಳನ್ನು ನೀಡುವ ಮೂಲಕ ನುಡಿದಂತೆ ನಡೆಯುವ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ ಎಂದರು.

ಈ ವೇಳೆ ಮಾಜಿ ಸಚಿವರು ಹಾಗೂ‌ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದಮೇಲೆ ರಾಜ್ಯದಲ್ಲಿ ಆಡಳಿತ ವಿಭಾಗದಲ್ಲಿ ಬದಲಾವಣೆ ತರಬೇಕು.  ಸರ್ಕಾರ ಯೋಜನೆಗಳು, ಸೌಲಭ್ಯಗಳನ್ನು ಜನರಿಗೆ ನೇರವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸುವ ಮತ್ತು ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಮಹತ್ವಾಕಾಂಕ್ಷೆಯ ಜನಪರ ಆಡಳಿತಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಒತ್ತು ನೀಡಿದೆ. ನೆರೆಯ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಈಗಾಗಲೇ ಯಶಸ್ವಿಯಾಗಿ ಸಿ.ಎಂ ಅವರು ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೇ ನೀಡಿದ್ದು ಇದು  ರಾಜ್ಯಾದ್ಯಂತ ವಿಸ್ತರಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಮಾನ್ವಿಯಲ್ಲಿ ಇಂದು ಈ ಕಾರ್ಯಕ್ರಮಕ್ಕೆ ಚಾಲನೇ ನೀಡಿದ್ದೆವೆ ಎಂದರು.

ರಾಜ್ಯಮಟ್ಟದಲ್ಲಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಜನರ ಮನೆಬಾಗಿಲಿಗೇ ಸರ್ಕಾರಿ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಈ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಆಡಳಿತ ಯಂತ್ರದ ಪ್ರಾಮಾಣಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.

ಕೊನೆಯ ಭಾಗದ ರೈತರಿಗೆ ನೀರು ಹರಿಸಲು ಜಿಲ್ಲಾಧಿಕಾರಿಗಳ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಇತ್ತೀಚೆಗೆ ಪ್ರಾದೇಶಿಕ ಆಯುಕ್ತ ನೇತೃತ್ವದಲ್ಲಿ ರೈತರೊಂದಿಗೆ ಸಭೆ ಮಾಡಿ, ರೈತರ ಬೆಂಬಲಕ್ಕೆ ‌ನಿಂತಿದ್ದಾರೆ. ಅವರಿಗೆ ರೈತರು ಸಹಕರಿಸಿಬೇಕು ಎಂದರು.

ಜನರ ಕಷ್ಟ-ನಷ್ಟಗಳಿಗೆ ತಕ್ಷಣ ಪರಿಹಾರ ಸಿಗಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿದೆ. ಜನರ ಬೇಡಿಕೆ ಏನಿರುತ್ತದೆಯೋ ಆ ಬೇಡಿಕೆಗೆ ಸರಿಯಾದ ರೀತಿಯಲ್ಲಿ ಪರಿಹಾರ ಸಿಗಬೇಕು, ಅದು ನಿಗದಿತ ಸಮಯದಲ್ಲಿ ಸಿಗಬೇಕೆಂಬ ಒಂದು ಉದ್ದೇಶದಿಂದ ಈ ಯೋಜನೆಗೆ ಬಹಳಷ್ಟು ಮಹತ್ವವಾದಂತಹ ಪ್ರಯತ್ನ ಮಾಡಿ, ಅನೇಕ ಅಧಿಕಾರಿಗಳ ಜೊತೆಯಲ್ಲಿ, ಜನಪ್ರತಿನಿಧಿಗಳ  ಜೊತೆಯಲ್ಲಿ ಚರ್ಚೆ ಮಾಡಿ, ಈ ಯೋಜನೆ ಜಾರಿಗೆ ತರತಕ್ಕಂತಹ ಒಂದು ಪ್ರಯತ್ನ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರ್ಮಸಿಂಗ್ ಅವರ ಶ್ರಮದಿಂದ ಈ ಭಾಗದಲ್ಲಿ 371 ಜೆ ಜಾರಿಗೆ ಬಂದಿದೆ. ಮೊದಲು ‌ಈ ಭಾಗದಲ್ಲಿ ಕ್ಲಾಸ್ ಒನ್ ಆಫೀಸರ್ ಕಡಿಮೆ ಸಂಖ್ಯೆಯಲ್ಲಿ ಸಿಗುತ್ತಿದ್ದರು. ಆದರೆ 371 ಜೆ ಕಲಂ ಜಾರಿಯಾದ ನಂತರ ಈ ಭಾಗದಲ್ಲಿ ಆನೇಕ ಕ್ಲಾಸ್ ಒನ್ ಆಫೀಸರ್ ಸಿಗುತ್ತಾರೆ. ಅಲ್ಲದೆ ಅನೇಕರು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದೆ ಎಂದರು.

ಮಾನ್ವಿ ಶಾಸಕ ಹಂಪಯ್ಯ ನಾಯಕ ಅವರು ಮಾತನಾಡಿ, ಅಭಿವೃದ್ಧಿ, ಕೆಲಸ ‌ಕಾರ್ಯಗಳು ಎಲ್ಲರಿಗೂ ಸಿಗಬೇಕು. ಮಾನ್ವಿಯಲ್ಲಿ ಬರದ ಛಾಯೆ ನಿರ್ಮಾಣವಾಗಿದ್ದು, ದನಕರುಗಳಿಗೆ ಕುಡಿಯಲು ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.‌ ಬಿತ್ತನೆ ಮಾಡಿದ ಬೆಳೆಗಳು ನೀರು ಇಲ್ಲದೆ.‌ ಬಾಡುತ್ತಿವೆ ಕೂಡಲೇ ಎರಡನೇ ಪಟ್ಟಿಯಲ್ಲಿ  ಮಾನ್ವಿ ತಾಲೂಕನ್ನು ಬರ ತಾಲೂಕು ಎಂದು ಘೋಷಣೆ ಮಾಡಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು. ಜನರು ತಮ್ಮ ಅಹವಾಲುಗಳನ್ನು  ಲಿಖಿತ ರೂಪದಲ್ಲಿ ಮನವಿ ನೀಡಿ, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು  ಇದ್ದಾರೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಮಾನ್ವಿ ನಗರ ಯೋಜನಾ   ಪ್ರಾಧಿಕಾರದ ಅಧ್ಯಕ್ಷರಾದ  ಗಪೂರ್ಸಾಬ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ.ಕೆ.ಅಮರೇಶ, ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಎಸ್.ನಕುಲ್, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ , ಮಾನ್ವಿ ತಹಶಿಲ್ದಾರ್ ಭೀಮರಾಯ ರಾಮಸಮುದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ‌ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments

Popular posts from this blog