ಪಾದಯಾತ್ರೆ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ-ರಝಾಕ ಉಸ್ತಾದ್ ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.3- ಜಿಲ್ಲೆಯ ಲಿಂಗಸ್ಗೂರು ದಿಂದ ಬಳ್ಳಾರಿಯವರೆಗೆ ಬಿಜೆಪಿ ನಡಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದೆ, ವಾಲ್ಮೀಕಿ ನಿಗಮದ 184 ಕೋಟಿಯಲ್ಲಿ 179 ಕೋಟಿ ಹಣ ಪ್ರಕರಣ ದಾಖಲಾದ ಸಂದರ್ಭದಲ್ಲಿಯೇ ಸರಕಾರಕ್ಕೆ ವಾಪಸ್ ಬಂದಿದೆ, ಪ್ರಕರಣ ತನಿಖೆಯ ಹಂತದಲ್ಲಿದೆ, ಯಾರು ತಪ್ಪು ಮಾಡಿದ್ದಾರೆ ತನಿಖೆಯ ನಂತರ ಶಿಕ್ಷೆಯಾಗುತ್ತದೆ, ಅದರಲ್ಲಿ ಕೇಂದ್ರ ಸರಕಾರದ ಬ್ಯಾಂಕ್ ಸಹ ಭಾಗಿಯಾಗಿದೆ, ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ, ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರ ಡಾ.ರಝಾಕ ಉಸ್ತಾದ ದೂರಿದ್ದಾರೆ
ರಾಜ್ಯದಲ್ಲಿ ಭೀಕರ ಬರಗಾಲ ಇದೆ, ರೈತರು ಸಂಕಷ್ಟದಲ್ಲಿದ್ದಾರೆ, ರೈತರಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ರಾಷ್ಟ್ರೀಯ ತುರ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಲು ಹೋರಾಟ ಮಾಡಲಿ ಮತ್ತು ಬಿಜೆಪಿ ಜನಪರವಾಗಿ ಇದ್ದರೆ ಬರಗಾಲ ಪರಿಹಾರ ವಿತರಣೆಗೆ ಪಾದಯಾತ್ರೆ ಮಾಡಲಿ, ಅದು ಬಿಟ್ಟು ಜನತೆ ಸಂಕಷ್ಟದಲ್ಲಿ ಇದ್ದಾಗ ರಾಜಕೀಯ ಮೈಲೇಜ್ ಪಡೆಯುವ ಈ ಪಾದಯಾತ್ರೆ ಫಲ ನೀಡುವುದಿಲ್ಲ. ಬಿಜೆಪಿ ಪಕ್ಷ ಕಳೆದ ತಿಂಗಳು ಬರಗಾಲ ವೀಕ್ಷಣೆಗೆ ಬಂದಿತ್ತು, ಆ ವರದಿ ಏನು ಮಾಡಿದ್ದೀರಿ, ಅಧಿವೇಶನ ನಡೆಯುವಾಗಲೂ ಹೋರಾಟ ಮಾಡಿ ಬರಗಾಲ ವಿಷಯ ಚರ್ಚೆಗೆ ಬರದಂತೆ ಮಾಡಿದ್ದೀರಿ, ಬರಗಾಲ ವಿಕ್ಷಣೆ ವರದಿ ಸರಕಾರಕ್ಕೆ ಸಲ್ಲಿಸುವ ಕೆಲಸ ಬಿಟ್ಟು ಈ ಪಾದಯಾತ್ರೆ ಮಾಡುವದು ಯಾತಕ್ಕೆ ಎಂದು ಪ್ರಶ್ನಿಸಿದ್ದಾರೆ.
ಪಾದಯಾತ್ರೆಯಲ್ಲಿ ರಾಜಕೀಯ ಮಾಡುವದು ಬಿಟ್ಟು ಜನಪರವಾಗಿ ಮಾತನಾಡುವದು ಒಳ್ಳೆಯದು, ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಗಳು ಬರಗಾಲದಿಂದ ತತ್ತರಿಸಿವೆ, ಎಡದಂಡೆ ಕಾಲುವೆ ನೀರು ಕೊನೆಯ ಭಾಗಕ್ಕೆ ಬರುತ್ತಿಲ್ಲ ವೆಂದು ರೈತರು ಹೋರಾಟ ಮಾಡುತ್ತಿದ್ದಾರೆ, ಕೇಂದ್ರ ಸರಕಾರದ ಎನ್.ಡಿ.ಆರ್.ಎಫ್. ಕಠಿಣ ನಿಯಮಗಳ ಕಾರಣ ಎಲ್ಲಾ ತಾಲ್ಲೂಕು ಗಳು ಬರಗಾಲ ಪಟ್ಟಿಯಲ್ಲಿ ಬಂದಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಇಂತಹ ಸಂಕಷ್ಟ ದ ಸಮಯದಲ್ಲಿ ಹೋರಾಟ ಮಾಡುವದು ಎಷ್ಟರಮಟ್ಟಿಗೆ ಸರಿ ಎನ್ನುವದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment