ಹತ್ಯೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನೊಂದ ಕುಟುಂಬಗಳಿಗೆ ಆದಿಜಾಂಬವ ಅಭಿವೃದ್ಧಿ ನಿಗಮದ ನೆರವು- ಜಿ.ಎಸ್. ಮಂಜುನಾಥ್
ಜಯ ಧ್ವಜ ನ್ಯೂಸ್ ,ರಾಯಚೂರು. ಸೆ.10-
ಜಿಲ್ಲೆಯಲ್ಲಿ ನಡೆದಿರುವ ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ನೆರವು ನೀಡಲು ನಮ್ಮ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ದೇವದುರ್ಗ ತಾಲ್ಲೂಕಿನ ಹದ್ದಿನಾಳ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಸುಮಾರು 37 ವರ್ಷದ ಭೂಮಾನಂದ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭೂಮಾನಂದ ಅವರ ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಎರಡು ಎಕರೆ ಜಮೀನು ಹಾಗೂ ಬೋರ್‌ವೆಲ್ ಒದಗಿಸಲು ನಿಗಮದಿಂದ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇವರ ಕುಟುಂಬಕ್ಕೆ ಕಳೆದ ವಾರ ಸಮಾಜ ಕಲ್ಯಾಣ ಇಲಾಖೆ ಸಚಿವರು ಭೇಟಿ ನೀಡಿರುವ ಕುರಿತು ತಮ್ಮ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳಿಗೆ ಎರಡು ಎಕರೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಜಮೀನು ಮಂಜೂರಾದ ತಕ್ಷಣ ಬೋರ್‌ವೆಲ್‌ಗಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲು ನಿಗಮದಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಭೂಮಾನಂದ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ಪರಿಹಾರಧನ ನೀಡಲಾಗಿದ್ದು, ಹೆಚ್ಚುವರಿ ಪರಿಹಾರ ಧನವನ್ನು ಅವರ ಮೂವರು ಮಕ್ಕಳ ಹೆಸರಿನಲ್ಲಿ ಎಫ್‌ಡಿ (ಸ್ಥಿರ ಠೇವಣಿ) ರೂಪದಲ್ಲಿ ಇರಿಸುವಂತೆ ತಾಯಿಗೆ ಸಲಹೆ ನೀಡಲಾಗಿದೆ. ಇದರಿಂದ ಅವರ ಮಕ್ಕಳ ಭವಿಷ್ಯದ ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಲಿಂಗಸುಗೂರು ತಾಲ್ಲೂಕಿನ ಕರಡಕಲ್ ಗ್ರಾಮದಲ್ಲಿ ರಾಣಿಮ್ಮ ಎಂಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣದಲ್ಲಿಯೂ ನೊಂದ ಕುಟುಂಬಕ್ಕೆ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಣೆಮ್ಮ ಅವರ ಪತಿ ತಿಪ್ಪಣ್ಣ ಅವರಿಗೆ ಎರಡು ಎಕರೆ ಜಮೀನು ಹಾಗೂ ಬೋರ್‌ವೆಲ್ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ರಾಣಿಮ್ಮ ಅವರ ಮಕ್ಕಳಾದ ಸುಜಾತಾ ಮತ್ತು ಪ್ರಸನ್ನ ಅವರು ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ನೊಂದ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಅವಕಾಶವಿದ್ದು, ಈ ಕುರಿತು ಸಮಾಜ ಕಲ್ಯಾಣ ಸಚಿವರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸರ್ಕಾರಿ ಉದ್ಯೋಗಕ್ಕೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಇಲ್ಲದಿರುವುದರಿಂದ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಭೂಮಾನಂದ ಅವರ ಸಹೋದರರಿಗೂ ನಿಗಮದ ನಿಯಮಾನುಸಾರ ನೆರವು ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರ ಮೂವರು ಸಹೋದರರಿಗೆ ತಲಾ ಒಂದು ವಾಹನ ನೀಡಲು ನಿರ್ಧರಿಸಲಾಗಿದ್ದು, ಚಾಲನಾ ಪರವಾನಗಿ ಹೊಂದಿರುವವರಿಗೆ ವಾಹನ ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಅಶ್ವಿನಿ ಅವರ ಕುಟುಂಬಕ್ಕೂ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣವು ಚಲುವಾದಿ ಸಮುದಾಯಕ್ಕೆ ಸಂಬಂಧಿಸಿದ್ದಾಗಿದ್ದು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ತಮ್ಮನ್ನು ಸಂಪರ್ಕಿಸಿ ಕುಟುಂಬಕ್ಕೆ ಎರಡು ಎಕರೆ ಜಮೀನು ಒದಗಿಸುವ ಕುರಿತು ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಭೂಮಾನಂದ ಅವರ ಹತ್ಯೆ, ರಾಣಿಮ್ಮ ಅವರ ಅತ್ಯಾಚಾರ ಮತ್ತು ಹತ್ಯೆ ಹಾಗೂ ಅಶ್ವಿನಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತಹ ಘಟನೆಗಳಿಂದ ನೊಂದ ಕುಟುಂಬಗಳಿಗೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅಭಿವೃದ್ಧಿ ನಿಗಮಗಳ ಮೂಲಕ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲಿ ನೆರವು ಒದಗಿಸಲಾಗುತ್ತಿದೆ ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ್. ವರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ. ಜಿ. ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು. ಸಮಾಜದ ಮುಖಂಡರು ಉಪಸ್ಥಿತರಿದ್ದರು.

Comments
Post a Comment