ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ: ಪತ್ರಕರ್ತರ ಒತ್ತಡದ ಬದುಕಿನಲ್ಲಿ ಕ್ರೀಡೆ ಮುಖ್ಯ- ಡಾ.ಸುರೇಶ ಜಿ
ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.24- ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮದ ಅಂಗವಾಗಿ ಪತ್ರಕರ್ತರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಪತ್ರಕರ್ತರ ಒತ್ತಡದ ಬದುಕಿನಲ್ಲಿ ಕ್ರೀಡೆ ಅತ್ಯಂತ ಮುಖ್ಯವಾಗಿದ್ದು, ಪತ್ರಕರ್ತರು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ ಹೇಳಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳ್ಳಿ ಮಹೋತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಜೊತೆಗೆ ಪತ್ರಕರ್ತರಿಗಾಗಿ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ್ ಮಾತನಾಡಿ, ಕ್ರೀಡೆಯನ್ನು ಕೇವಲ ಒಂದು ದಿನ ಆಡುವುದಕ್ಕೆ ಸೀಮಿತಗೊಳಿಸದೆ ಪ್ರತಿದಿನ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದ್ದು, ವಿವಿಧ ಕ್ರೀಡೆಗಳನ್ನು ಆಯೋಜಿಸಿರುವ ರಿಪೋರ್ಟರ್ಸ್ ಗಿಲ್ಡ್‌ನ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗಾಗಿ ವಿವಿಧ ಚಟುವಟಿಕೆ , ಸ್ಪರ್ಧೆಗಳನ್ನ ಆಯೋಜಿಸಲಾಗಿದೆ. ಪತ್ರಕರ್ತರಿಗಾಗಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಇಂದು ಶಟಲ್ ಬ್ಯಾಡ್ಮಿಂಟನ್‌ನೊಂದಿಗೆ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಚೆಸ್, ಕೇರಂ,ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿವೆ. ಪತ್ರಕರ್ತರಿಗಾಗಿ ಈಗಾಗಲೇ ಕತೆ ಕವನ ಸ್ಪರ್ಧೆ ಏರ್ಪಡಿಸಲಾಗಿತ್ತು ಆಯ್ಕೆಯಾದ ಕತೆ ಕವನಗಳ ಸಂಕಲನವನ್ನ ಪುಸ್ತಕ ರೂಪದಲ್ಲಿ ಹೊರತರಲು ಸಿದ್ದತೆ ನಡೆದಿದೆ. ಛಾಯಾಚಿತ್ರ ಸ್ಪರ್ಧೆ, ವ್ಯಂಗ್ಯ ಚಿತ್ರ ಸ್ಪರ್ಧೆ ಗಳನ್ನ ಏರ್ಪಡಿಸಲಾಗಿದ್ದು ಎಲ್ಲರೂ ಭಾಗವಹಿಸಿ ಬೆಳ್ಳಿಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಮಾಜಿ ಅಧ್ಯಕ್ಷ ಚನ್ನಬಸವಣ್ಣ, ಹಿರಿಯ ಪತ್ರಕರ್ತ ಶಿವಮೂರ್ತಿ ಹಿರೇಮಠ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಗನ್ನಾಥ ಪೂಜಾರಿ, ಮಂಜುನಾಥ ಸಾಲಿ, ಮಹಾನಂದ, ಜಯಕುಮಾರ ದೇಸಾಯಿ ಕಾಡ್ಲೂರು, ನೀಲಕಂಠಸ್ವಾಮಿ, ಅಣ್ಣಪ್ಪ ಮೇಟಿಗೌಡ, ಗುರುರಾಜ ಕೆ, ಸುರೇಶ್ ಗೌಡ, ಅಮರೇಶ್ ಸಜ್ಜನ, ಖಾಜಾ ಹುಸೇನ್,ಅರುಣ್ , ದುರ್ಗೇಶ್, ವಾಸು , ರಾಚಯ್ಯ ಸ್ವಾಮಿ, ವಿರೇಶ್, ರವಿ ದಾದಾಸ, ಆನಂದ್ ಸ್ವಾಮಿ,ಬಾಲು, ಖಾದರ್, ಶಿವು, ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು. ಪಂದ್ಯಗಳ ನಿರ್ಣಾಯಕರಾದ ನಿವೃತ್ತ ಶಿಕ್ಷಕ ಮಲ್ಲಪ್ಪ ಹಾಗೂ ಶಿಕ್ಷಕ ಮಹಮ್ಮದ್ ಖಾಲಿದ್ ಉಪಸ್ಥಿತರಿದ್ದರು. ಗಿಲ್ಡ್ ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ವಿಜೇತ ತಂಡ:
ಸಿಂಗಲ್ಸ್ ವಿಭಾಗದಲ್ಲಿ :ಶ್ರೀಕಾಂತ್ ಸಾವೂರು ಪ್ರಥಮ ಸ್ಥಾನ, ಮಹಾನಂದ ದ್ವೀತಿಯ ಸ್ಥಾನ ಹಾಗೂ ಗುರುರಾಜ ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ಡಬಲ್ಸ್ ವಿಭಾಗದಲ್ಲಿ: ಪ್ರಥಮ ಸ್ಥಾನ ಅರುಣ ಕುಮಾರ್ -ಬಾವಾಸಲಿ, ದ್ವಿತೀಯ ಸ್ಥಾನ ಶ್ರೀಕಾಂತ್ ಸಾವೂರು-ಲಕ್ಷ್ಮಣ ಕಪಗಲ್, ಶಿವಮೂರ್ತಿ ಹಿರೇಮಠ- ಗುರುರಾಜ ಕೆ ಜೋಡಿ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಇನ್ನೂ ಈ ಪಂದ್ಯಾವಳಿಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು. ಹಿರಿಯ ಪತ್ರಕರ್ತರು ಕ್ರೀಡಾಂಗಣಕ್ಕೆ ಆಗಮಿಸಿ ಕ್ರೀಡಾ ಪಟುಗಳನ್ನ ಪ್ರೋತ್ಸಾಹಿಸಿದರು.





Comments
Post a Comment