371ಜೆ ವ್ಯಾಪ್ತಿಗೆ ವಿಜಯಪುರ ಜಿಲ್ಲೆ ಸೇರ್ಪಡೆ ಬಗ್ಗೆ ವಿಜಯೇಂದ್ರ ಹೇಳಿಕೆಗೆ ರಝಾಕ್ ಉಸ್ತಾದ್ ಖಂಡನೆ ಜಯ ಧ್ವಜ ನ್ಯೂಸ್ , ರಾಯಚೂರು , ಅ.26- ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ಸಂವಿಧಾನದ ಅನುಚ್ಛೇಧ 371ಜೆ ವ್ಯಾಪ್ತಿಗೆ ಸೇರಲು ಕರ್ನಾಟಕದ ಹಲವು ಪ್ರದೇಶಗಳು ಪ್ರಯತ್ನ ಮಾಡುತ್ತಿರುವ ನಡುವೆಯೇ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಇತ್ತೀಚಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ 371ಜೆ ವ್ಯಾಪ್ತಿಗೆ ಸೇರಿಸುವ ಹೋರಾಟದ ವೇದಿಕೆಗೆ ಹೋಗಿ ವಿಜಯಪುರ ಜಿಲ್ಲೆಯನ್ನು 371ಜೆ ವ್ಯಾಪ್ತಿಗೆ ಸೇರಿಸಲು ಸಹಕರಿಸುವದಾಗಿ ಮತ್ತು ಸರಕಾರಕ್ಕೆ ಒತ್ತಾಯಿಸುವದಾಗಿ ಹೇಳಿರುವದು ಕಲ್ಯಾಣ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ಮೋಸ. ಈ ಹಿಂದೆ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ 371ಜೆ ತಿದ್ದುಪಡಿ ಸಾದ್ಯವಿಲ್ಲ ಎಂದು ತಿರಸ್ಕರಿಸಿತ್ತು, ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಸರಕಾರ ನೀಡಿರುವ 371ಜೆ ಬೇರೆಯವರಿಗೆ ಹಂಚಲು ಮುಂದಾಗಿರುವದು ಕಲ್ಯಾಣ ಕರ್ನಾಟಕ ವಿರೋಧಿ ಮನೋಭಾವನೆ ಮತ್ತು ಜನವಿರೋಧಿ ಮನಸ್ಥಿತಿ ಕಾಣುತ್ತಿದೆ.
ರಾಜ್ಯದ ಯಾವುದೇ ಪ್ರದೇಶಕ್ಕೆ ಸಂವಿಧಾನ ಅನುಚ್ಛೇಧ 371ರ ಅಡಿಯಲ್ಲಿ ಸೌಲಭ್ಯಬೇಕಿದ್ದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಆ ಪ್ರದೇಶಗಳಿಗೆ ಸಂವಿಧಾನದ 371ರ ತಿದ್ದುಪಡಿ ಮಾಡಿ 371ಕೆ, 371ಎಲ್ ಇತ್ಯಾದಿ ಕೊಡಿಸಲಿ, ಯಾವುದೇ ಕಾರಣಕ್ಕೂ ನಮ್ಮ ಪ್ರದೇಶದ ತಂಟೆಗೆ ಬರದಿರಲಿ, ಈಗಾಗಲೇ ಕಲ್ಯಾಣ ಕರ್ನಾಟಕದ ಜನತೆ ಕಳೆದ ಚುನಾವಣೆಯಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಮಣ್ಣು ಮುಕ್ಕಿಸಿದ್ದಾರೆ, ಇದೇ ರೀತಿ ಮುಂದುವರೆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಈ ಭಾಗದಿಂದ ಬುಡ ಸಮೇತ ಕಿತ್ತು ಹಾಕುತ್ತಾರೆ. ಕಲ್ಯಾಣ ಕರ್ನಾಟಕದ ಸುತ್ತ ಇರುವ ಎಲ್ಲಾ ಜಿಲ್ಲೆಗಳಿಗೆ 371ಜೆ ಹಂಚುತ್ತ ಕೂಡಲು ಇದೇನು ಅಂಗಡಿಯಲ್ಲಿ ಸಿಗುವ ಪದಾರ್ಥ ಅಂದುಕೊಂಡಿದ್ದಾರಾ ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಎಂದು ಪ್ರಶ್ನಿಸಿದ್ದಾರೆ. ಹಿಂದೆ ಬಿ.ಶ್ರೀರಾಮುಲು ಅವರು ಮೊಳಕಾಲ್ಮೂರು ತಾಲ್ಲೂಕನ್ನು 371ಜೆ ವ್ಯಾಪ್ತಿಗೆ ಸೇರಿಸುವದಾಗಿ ಹೇಳಿದ್ದು ಇನ್ನು ಜನ ಮರೆತಿಲ್ಲ. ಇತ್ತೀಚಿಗೆ ಕಲ್ಯಾಣ ಕರ್ನಾಟಕಕ್ಕೆ 371ಜೆ ಅಡಿಯಲ್ಲಿ ಸಿಗುತ್ತಿರುವ ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳು, ಸರಕಾರಿ ನೌಕರಿಯಲ್ಲಿ ಸಿಗುತ್ತಿರುವ ಮೀಸಲಾತಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಸರಕಾರ ನೀಡುತ್ತಿರುವ 5,000 ಕೋ.ರೂ ಅನುದಾನ ನೋಡಿ ಇತರೆ ಪ್ರದೇಶದ ಶಾಸಕರು ಮತ್ತು ಜನತೆ ದುರಾಸೆಯಿಂದ ತಮಗೂ 371ಜೆ ವ್ಯಾಪ್ತಿಗೆ ಸೇರಿಸುವಂತೆ ಕೋರುತ್ತಿರುವದು ಕಾಣುತ್ತಿದೆ.
ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಕಲ್ಯಾಣ ಕರ್ನಾಟಕಕ್ಕೆ 371ಜೆ ಯಾವ ಕಾರಣಕ್ಕೆ ಬಂದಿದೆ, ಯಾವ ಉದ್ದೇಶಕ್ಕೆ ನೀಡಲಾಗಿದೆ ಎನ್ನುವ ಇತಿಹಾಸ ತಿಳಿದು ಮಾತನಾಡಲಿ, ಕಲ್ಯಾಣ ಕರ್ನಾಟಕಕ್ಕೆ 371ಜೆ ನೀಡಿರುವದು ಐತಿಹಾಸಿಕ ಕಾರಣಕ್ಕೆ ವಿನಃ, ಈ ಭಾಗ ಹಿಂದುಳಿದಿದೆ ಎನ್ನುವ ಏಕೈಕ ಕಾರಣಕ್ಕೆ ಕೊಟ್ಟಿಲ್ಲ ಎನ್ನುವದನ್ನು ತಿಳಿದು ಮಾತನಾಡುವದು ಒಳಿತು. ಇನ್ನು ಮುಂದೆ ಬಾಯಿಗೆ ಬಂದಂತೆ ಮಾತನಾಡಿದರೆ ವಿಜಯೇಂದ್ರ ಅವರಿಗೆ ಕಂಡ ಕಂಡಲ್ಲಿ ಘೇರಾವ್ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ ಉಸ್ತಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment