ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ - ಕೇಶವರೆಡ್ಡಿ 


ಜಯ ಧ್ವಜ ನ್ಯೂಸ್ ,ರಾಯಚೂರು, ಅ.7- ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿ ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.‌ಆಯುರ್ವೇದ ಚಿಕಿತ್ಸಾ ಪದ್ದತಿಯ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಚಿಕಿತ್ಸಾ ಪದ್ಧತಿಗಳು ವ್ಯಾಪಕವಾಗುವುದಕ್ಕೂ ಮುನ್ನ ನಮ್ಮ ಪೂರ್ವಜರು ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಿದ್ದರು ಎಂದು  ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕೇಶವ ರೆಡ್ಡಿ ಹೇಳಿದರು.


ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ–2026ರ ಅಂಗವಾಗಿ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ  ಪತ್ರಕರ್ತರಿಗಾಗಿ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಯಚೂರಿನಲ್ಲಿ ಸುಸಜ್ಜಿತ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆಯನ್ನ ಆರಂಭಿಸಲಾಗಿದೆ. ಪತ್ರಕರ್ತರು , ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆಯನ್ನ ಪಡೆಯಬಹುದು. ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಜನರಿಗೆ ತಲುಪಿಸಬೇಕೆಂಬ ಆಶಯ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಆಯುರ್ವೇದವು ಭಾರತೀಯ ವೈದ್ಯಕೀಯ


ಪರಂಪರೆಯ ಪ್ರಮುಖ ಭಾಗವಾಗಿದೆ. ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜನ್ನು ಕೇವಲ ದುಡ್ಡು ಮಾಡುವ  ಉದ್ದೇಶದಿಂದ ಸ್ಥಾಪಿಸಿಲ್ಲ, ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆ ಎದುರಾದರೆ ಅಂತಹ ಅರ್ಹ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಸಂಸ್ಥೆ ಸಿದ್ಧವಿದೆ. ಅವರ ಚಿಕಿತ್ಸೆಗೆ ಅಗತ್ಯವಾಗುವ ವೆಚ್ಚವನ್ನು ಕಾಲೇಜು ವತಿಯಿಂದ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಶವ ರೆಡ್ಡಿ ತಿಳಿಸಿದರು.


ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕರ್ಮುಡಿ ಮಾತನಾಡಿ, ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯಚಟುವಟಿಕೆಗಳನ್ನು ಸಂಬಂಧಪಟ್ಟ ನಿಯಮ ಹಾಗೂ ಕಾನೂನುಗಳ ಅನುಸಾರ ನಡೆಸಲಾಗುತ್ತಿದೆ.


ಆಯುರ್ವೇದದಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಕೂದಲು ಉದುರುವಿಕೆ, ಪಾರ್ಶ್ವ ವಾಯು,  ಮೂಲವ್ಯಾಧಿ (ಪೈಲ್ಸ್) ಸಂದಿವಾತ, ಬೆನ್ನು ನೋವಿನ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿವೆ ಎಂದರು.

ಔಷಧ ತಯಾರಿಕೆಗೆ ಅಗತ್ಯವಾಗುವ ಹಲವು ಔಷಧೀಯ ಗಿಡಮೂಲಿಕೆಗಳನ್ನು ಸಂಸ್ಥೆ ಆವರಣದಲ್ಲಿಯೇ ಬೆಳೆಸಲಾಗುತ್ತಿದೆ. ಕೆಲವು ಸಸ್ಯಗಳಿಂದ ಔಷಧೀಯ ತೈಲಗಳನ್ನು ತಯಾರಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.


ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಎದುರಾದಾಗ ಅಲೋಪಥಿ ಚಿಕಿತ್ಸೆಯತ್ತ ಹೆಚ್ಚಿನವರು ಮೊರೆ ಹೋಗುತ್ತಾರೆ. ಆದರೆ ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಹೆಚ್ಚಬೇಕಾಗಿದೆ. ಸೂಕ್ತ ವೈದ್ಯಕೀಯ ಸಲಹೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ. ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನ ಎಲ್ಲಾ ಪತ್ರಕರ್ತರು ಪಡೆಯಬೇಕು ಎಂದು ಹೇಳಿದರು.


ಶಿಬಿರದಲ್ಲಿ ಪತ್ರಕರ್ತರ ಆರೋಗ್ಯ ತಪಾಸಣೆ ನಡೆಸಿದ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರು, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು. ಹಲವು ಪತ್ರಕರ್ತರು ಆರೋಗ್ಯ ತಪಾಸಣೆಗೆ ಒಳಗಾಗಿ ಆಯುರ್ವೇದ ಚಿಕಿತ್ಸಾ ವಿಧಾನಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಎಚ್. ವೀರನಗೌಡ, ಚೆನ್ನಬಸವ ಬಾಗಲವಾಡ, ಖಾನ್ ಸಾಬ ಮೊಮೀನ್, ವೆಂಕಟೇಶ ಹೂಗಾರ್ ಉಪಸ್ಥಿತರಿದ್ದರು .


ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿರಿಯ , ಕಿರಿಯ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು, ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.


Comments

Popular posts from this blog